ADVERTISEMENT

ಮತೀಯ ಕಾಯಿದೆಗೆ ವಿಹಿಂಪ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 9:20 IST
Last Updated 15 ಜನವರಿ 2012, 9:20 IST

ನರೇಗಲ್: ಮತೀಯ ಹಿಂಸಾ ಚಾರಗಳನ್ನು ತಡೆಯುವ ಹೆಸರಿನಲ್ಲಿ ಕೇಂದ್ರದ ಯುಪಿಎ ಸರ್ಕಾರ ಮತೀಯ ಹಿಂಸಾಚಾರ ತಡೆ ವಿಧೇಯಕವನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸಲು ಹೊರಟಿದೆ. ಇದರಿಂದ ದೇಶದಲ್ಲಿರುವ ಹಿಂದೂಗಳ ಮೇಲೆ ದೌರ್ಜನ್ಯ ಮಾಡಿದಂತಾಗುತ್ತದೆ ಎಂದು ಬೆಳಗಾವಿ ಪ್ರಾಂತ್ಯದ ವಿಶ್ವ ಹಿಂದು ಪರಿಷತ್ ಸಂಘಟನಾ ಕಾರ್ಯದರ್ಶಿ ಮಹಾಬಳೇಶ್ವರ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಓಂ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಧೇಯಕದಲ್ಲಿ ಒಟ್ಟು 9 ಅಧ್ಯಾಯಗಳು 138 ವಿಧಿಗಳು, 4 ಪರಿಷ್ಠಗಳಿವೆ ಅದರಲ್ಲಿ ಉಪವಿಧಿ ( ಜೆ), ಅಧ್ಯಾಯ 1 ವಿಧಿ 3 ರಲ್ಲಿ ಬರುವ ಬಹು ಮುಖ್ಯವಾದ ಪದ ಸಮೂಹ ಎಂದರೆ ಅಲ್ಪಸಂಖ್ಯಾತ ಮತ್ತು ಪರಿಶಿಷ್ಟಜಾತಿ, ಪಂಗಡಗಳು ಈ ಸಮೂಹಕ್ಕೆ ಸೇರಿದವರು ಮಾತ್ರ ಪೀಡಿತ ವ್ಯಕ್ತಿ ಎಂದು ಹೆಸರಿಸಲಾಗಿದೆ. ಇದು ಪೂರ್ವಾಗ್ರಹ ಪೀಡಿತವಾಗಿದ್ದು, ಇದಕ್ಕೆ ನಮ್ಮ ವಿರೋಧವಿದೆ ಎಂದರು.

ಈ ಮಸೂದೆ ಜಾರಿಗೆ ಬರುವುದರಿಂದ ಮತಾಂತರ ಪ್ರಕ್ರಿಯೆ ಮಿತಿಮೀರಿ ಬೆಳೆಯುತ್ತದೆ. 1975 ರ ತುರ್ತು ಪರಿಸ್ಥಿಯಲ್ಲಿ ಇಂದಿರಾ ಗಾಂಧಿಯವರು ಮನಸೋಇಚ್ಛೆ ಕೈಗೊಂಡ ಅನೇಕ ದಮನಕಾರಿ ಕಾನೂನುಗಳು ಇದರ ಮುಂದೆ ಸಪ್ಪೆಯಾಗುತ್ತವೆ. ಇದು ಜಾರಿಗೆ ಬಂದಲ್ಲಿ ಹಿಂದುಗಳು ದೇಶದಲ್ಲಿ ಬದುಕುವುದೇ ಕಷ್ಟವಾಗುತ್ತದೆ ಎಂದರು.
ನಿಡಗುಂದಿಕೊಪ್ಪದ ಶಿವಬಸವ ಸ್ವಾಮೀಜಿ ಮಾತನಾಡಿ, ಈ ಕಾಯ್ದೆ ಜಾರಿಗೆ ತರುವುದರಿಂದ ದಲಿತರಿಗೆ ಅನ್ಯಾಯವಾಗುತ್ತದೆ. ಈ ವಿಧೇಯಕವನ್ನು ಜಾರಿಗೆ ತರಬೇಕಾದರೆ ಸಮಸ್ತ ಹಿಂದೂಗಳ ವಿಶ್ವಾಸ ಅಗತ್ಯ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ವಿಶ್ವದಾದ್ಯಂತ ಇರುವ ಎಲ್ಲ ಹಿಂದೂಗಳು ಎಚ್ಚೆತ್ತುಕೊಂಡು ಉಗ್ರ ರೀತಿಯ ಪ್ರತಿಭಟನೆ ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. 

ಸುದ್ದಿಗೋಷ್ಠಿಯಲ್ಲಿ ಅಶೋಕ ಬೇವಿನಕಟ್ಟಿ, ಬಾಳಪ್ಪ ಹಿರೇಮನಿ, ಚಂದ್ರು ಹುಯಿಲಗೋಳಮಠ, ಹನಮಂತಸಾ ನಿರಂಜನ ಮತ್ತಿತರರು ಹಾಜರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.