ADVERTISEMENT

ಮರಳು, ಕಲ್ಲು ಅಕ್ರಮ ಗಣಿಗಾರಿಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 5:30 IST
Last Updated 4 ಅಕ್ಟೋಬರ್ 2011, 5:30 IST

ಶಿರಹಟ್ಟಿ: ತಾಲ್ಲೂಕಿನ ಕೊಂಚಿಗೇರಿ, ಸೂರಣಗಿ ಗ್ರಾಮ ಪಂಚಾಯಿತಿಯ ಕೆಲ ಗ್ರಾಮಗಳು ಸೇರಿದಂತೆ ಅನೇಕ ಕಡೆಗಳಲ್ಲಿ ಅಕ್ರಮವಾಗಿ ಮರಳು ಮತ್ತು ಕಲ್ಲು ಗಣಿಗಾರಿಕೆ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚನ್ನಪ್ಪ ಜಗಲಿ ಮತ್ತು ಕೋಟೆಪ್ಪ ವರ್ದಿ ಆರೋಪಿಸಿದರು.

ಸೋಮವಾರ ಸ್ಥಳೀಯ ಸಾಮರ್ಥ್ಯ ಸೌಧದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸರ್ಕಾರದ ಪರವಾನಿಗೆ ಇಲ್ಲದೇ ತಮಗಿಷ್ಟ ಬಂದಂತೆ ಒಂದು ಸ್ಥಳದಲ್ಲಿ ಕ್ರೋಡೀಕರಣ ಮಾಡಿ ನಂತರ ಅಕ್ರಮವಾಗಿ ಮರಳನ್ನು ಪೂರೈಕೆ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಪ್ರಸ್ತಾಪ ಮಾಡಿದರು.

ನಿರಂತರವಾಗಿ ನಡೆಯುತ್ತಿರುವ ಈ ಘಟನೆ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ಬಂದರೂ ಯಾವ ಕ್ರಮವನ್ನು ಕೈಗೊಂಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

ತಾಲ್ಲೂಕಿನ ರಾಮಗಿರಿ ಮತ್ತು ಮಾಗಡಿ ಕ್ರಾಸ್‌ಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ರಚಿಸಿ ಪಾಸ್ ಇಲ್ಲದಿರುವ ಮತ್ತು ಅನಧಿಕೃತವಾಗಿ ಸಾಗಾಟ ಮಾಡುವ ಎಲ್ಲ ಕಾನೂನು ಬಾಹಿರ ಚಟುವಟಿಕೆಗಳಿಗೆ ನಿಯಂತ್ರಣಕ್ಕೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ತಹಸೀಲ್ದಾರ್ ಆರ್.ಡಿ. ಉಪ್ಪಿನ ಮಾತನಾಡಿ, ಅಕ್ರಮ ಕಾರ್ಯಗಳಿಗೆ ಪ್ರತಿರೋಧ ಒಡ್ಡುವ ಕಾರ್ಯ ಎಲ್ಲರಿಂದಲೂ ಆಗಬೇಕು. ಸರ್ಕಾರಕ್ಕೆ ನಷ್ಟ ಮಾಡುವುದರ ಜೊತಗೆ ಸಂಪನ್ಮೂಲವನ್ನು ಹಾಳು ಮಾಡುವ ಕೆಲಸಗಳಿಗೆ ಕಡಿವಾಣ ಅತ್ಯಗತ್ಯ. ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದಿ ಚೆಕ್‌ಪೋಸ್ಟಗಳ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಲಕ್ಷ್ಮೇಶ್ವರ ಆಸ್ಪತ್ರೆಗೆ ಮಹಿಳಾ ವೈದ್ಯರ ಕೊರತೆ ಇರುವುದರಿಂದ ತೀವ್ರ ತೊಂದರೆಯಾಗಿದೆ. ತಾಲ್ಲೂಕು ಆರೋಗ್ಯಾಧಿಕಾರಿಗಳು ತಕ್ಷಣ ವೈದ್ಯರನ್ನು ನೇಮಕ ಮಾಡಬೇಕು ಜಗಲಿ ಮನವಿ ಮಾಡಿದರು.

ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ಪಟ್ಟಣದಲ್ಲಿ ಸಿಲಿಡರ್‌ಗಳನ್ನು ಖಾಸಗಿ ವಾಹನಗಳಿಗೆ ಪೂರೈಕೆ ಮಾಡುತ್ತಿದ್ದು, ಇದರಿಂದ ಜನತೆಗೆ ತೀವ್ರ ತೊಂದರೆ ಆಗಿದೆ. ಸಮಯಕ್ಕೆ ಸರಿಯಾಗಿ ಸಿಲಿಡರ್ ಪೂರೈಕೆ ಆಗುತ್ತಿಲ್ಲ. ವಾಹನಗಳಿಗೆ ಪೂರೈಕೆ ಮಾಡುವ ಅಂಗಡಿಗಳ ಮಾಲೀಕರಿಗೆ ಪಡಿತರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಬೇಕು ಎಂದು ಜಗಲಿ ಒತ್ತಾಯಿಸಿದರು. 

ಅರ್ಧಕ್ಕೆ ನಿಂತಿರುವ ಸೂರಣಗಿ ಬಸ್ ನಿಲ್ದಾಣದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಮತ್ತು ತಾಲ್ಲೂಕಿನಾದ್ಯಂತ ಭೂಸೇನಾ ನಿಗಮಕ್ಕೆ ಯಾವ ಕಾಮಗಾರಿಗಳನ್ನು ನೀಡಬಾರದು ಎಂದು ಕೋಟೆಪ್ಪ ಆಗ್ರಹಿಸಿದರು.

ಎನಾರ್ಕಾನ್ ಕಂಪೆನಿಯಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ. ಕಂಪೆನಿ ಸ್ಥಳಾಂತರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಬೇಕೆಂದು ಶಾಸಕ ರಾಮಣ್ಣ ಲಮಾಣಿ ತಹಸೀಲ್ದಾರ್ ಉಪ್ಪಿನ ಅವರಿಗೆ ಸೂಚಿಸಿದರು.

ತಾಲ್ಲೂಕಿನ ಕೊಗನೂರ ಗ್ರಾಮದಲ್ಲಿ ಕಳೆದ ಎಂಟು ದಿನಗಳಿಂದ ವಿದ್ಯುತ್ ಇಲ್ಲದೇ ಗ್ರಾಮಸ್ಥರು ಕತ್ತಲೆಯಲ್ಲಿ ದಿನ ಕಳೆದಿದ್ದಾರೆ. ಹೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯನ ಇಲ್ಲಿ ಎದ್ದು ಕಾಣುತ್ತದೆ ಎಂದು ಆರೋಪಿಸಿ ಸದಸ್ಯರು ಹೆಸ್ಕಾಂ ಅಧಿಕಾರಿ ಮಹೇಶ ಗೌಡರ ಅವರನ್ನು ತರಾಟೆಗೆ ತಗೆದುಕೊಂಡರು.

ಶಾಸಕ ರಾಮಣ್ಣ ಲಮಾಣಿ ಸಭೆ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಆರ್.ಡಿ. ಉಪ್ಪಿನ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವನಗೌಡ ಕಂಟಿಗೌಡರ, ಉಪಾಧ್ಯಕ್ಷೆ ಗಂಗಮ್ಮ ಲಮಾಣಿ, ಎಂಜಿನಿಯರ್ ಡಾ.ಡಿ. ಮೋಹನ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ನಿಂಬಣ್ಣ ಮಡಿವಾಳರ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.