ಮುಂಡರಗಿ: ನೀಲಂ ಚಂಡಮಾರುತದ ಪ್ರಭಾವದಿಂದ ಕಳೆದ ಬುಧವಾರ ಸಂಜೆಯಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ತಾಲ್ಲೂಕಿನ ಜನ ಜೀವನ ಪರದಾಡುವಂತೆ ಆಗಿದೆ. ಗೋಡೆ ಕುಸಿದು ಇಬ್ಬರು ವ್ಯಕ್ತಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬ್ಯಾಲವಾಡಿಗೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಬ್ಯಾಲವಾಡಿಗೆ ಗ್ರಾಮದಲ್ಲಿ ರೈತರೊಬ್ಬರು ಮನೆಯ ಗೋಡೆಗೆ ಅಂಟಿಕೊಂಡಂತೆ ತಾತ್ಕಾಲಿಕ ದನದ ಕೊಟ್ಟಿಗೆಯನ್ನು ಕಟ್ಟಿಕೊಂಡು ಅಲ್ಲಿ ದನಕರುಗಳನ್ನು ಕಟ್ಟುತ್ತಿದ್ದರು. ತಡರಾತ್ರಿ ಸುರಿದ ಭಾರಿ ಮಳೆಯಿಂದ ಗೊಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಅದನ್ನು ಗಮನಿಸಿದ ಗ್ರಾಮದ ಹನುಮಂತಪ್ಪ ಹಳ್ಳಿ, ಶಂಕ್ರಪ್ಪ ಹಡಪದ ಹಾಗೂ ಪರಸಪ್ಪ ಮಣ್ಣೂರ ಎಂಬುವವರು ಗೋಡೆಯ ಪಕ್ಕದಲ್ಲಿ ಕಟ್ಟಿದ್ದ ಜಾನುವಾರುಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಗೋಡೆ ಕುಸಿದು ಬಿದ್ದಿದ್ದು, ಗ್ರಾಮದ ಶಂಕ್ರಪ್ಪ ಹಡಪದ ಹಾಗೂ ಪರಸಪ್ಪ ಮಣ್ಣೂರ ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳು ಶುಕ್ರವಾರ ಬೆಳಿಗ್ಗೆ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಶಂಕ್ರಪ್ಪ ಹಡಪದ ಎಂಬುವವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತಹಶೀಲ್ದಾರ ಎ.ಟಿ.ನರೇಗಲ್ಲ ಹಾಗೂ ಮತ್ತಿತರ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ಕೋಟೆ ಭಾಗ, ಕಡ್ಲಿಪೇಟೆ, ಗರಡಿಮನಿ ಓಣಿ, ಎಸ್.ಎಸ್.ಪಾಟೀಲ ಕಾಲೊನಿ ಮೊದಲಾದ ವಿವಿಧ ಭಾಗಗಳಲ್ಲಿ ಕೆಲವು ಮನೆಗಳಿಗೆ ತೀವ್ರ ಹಾನಿ ಉಂಟಾಗಿದೆ. ಪಟ್ಟಣದ ಬಸವಣ್ಣೆಪ್ಪ ಜಕ್ಕಲಿ, ಕಾಲೇಸಾಬ್ ಉಳ್ಳಾಗಡ್ಡಿ, ನೂರ ಅಹಮ್ಮದ ಲೈನದ, ಮಾರುತಿ ಅಳವುಂಡಿ, ಜಂದಿಸಾಬ್ ಹಣಗಿ ಮೊದಲಾದವರು ಮನೆಗಳು ನೆಲಕ್ಕುರುಳಿವೆ. ತಾಲ್ಲೂಕಿನ ತಾಂಬ್ರಗುಂಡಿಯಲ್ಲಿ ಹಲವಾರು ಮನೆಗಳು ನೆಲಕ್ಕುರುಳಿವೆ ಎಂದು ತಿಳಿದು ಬಂದಿದೆ.
ಪರಿಹಾರಕ್ಕೆ ಆಗ್ರಹ: ತೀವ್ರ ಬರಗಾಲಕ್ಕೆ ಈಡಾಗಿದ್ದ ತಾಲ್ಲೂಕಿನ ಜನತೆ ಈಗ ಸುರಿ ಯುತ್ತಿರುವ ಅಕಾಲಿಕ ಮಳೆಯಿಂದ ತತ್ತರಿಸು ವಂತಾಗಿದ್ದು, ತಾಲ್ಲೂಕು ಆಡಳಿತ ತಕ್ಷಣ ನೊಂದ ವರ ನೆರವಿಗೆ ಧಾವಿಸಬೇಕು. ನಿರಂತರವಾಗಿ ಸುರಿದ ಮಳೆಯಿಂದಾಗಿ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಜನತೆ ಮನೆಗಳನ್ನು ಕಳೆದು ಕೊಂಡಿದ್ದಾರೆ. ಸರಕಾರ ತಕ್ಷಣ ಸೂಕ್ತ ಪರಿಹಾರ ನೀಡಿ ಮನೆ ನಿರ್ಮಿಸಿಕೊಡಬೇಕು ಎಂದು ತಾಲ್ಲೂಕು ಜೆಡಿಎಸ್ ವಕ್ತಾರ ದೇವಪ್ಪ ಇಟಗಿ ಒತ್ತಾಯಿ ಸಿದ್ದಾರೆ.
ತಾಲ್ಲೂಕಿನ ಜನತೆ ಸಕಾಲದಲ್ಲಿ ಮಳೆಯಾಗದೆ ಈಗಾಗಲೇ ಸಾಕಷ್ಟು ತೊಂದರೆಗೆ ಸಿಲುಕಿದ್ದು, ಈಗ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ ತೊಂದರೆಗೆ ಒಳಗಾಗಿದ್ದಾರೆ. ಇಂಥ ಸಂದರ್ಭದಲ್ಲಿ ಸರಕಾರ ಹಾಗೂ ಜನಪ್ರತಿನಿಧಿಗಳು ಜನ ಸಾಮಾನ್ಯರ ನೆರವಿಗೆ ಬರದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಉರುಳಿ ಬಿದ್ದ ಮನೆಗಳು
ಲಕ್ಷ್ಮೇಶ್ವರ: ನೀಲಂ ಚಂಡಮಾರುತದ ಹಿನ್ನೆಲೆಯಲ್ಲಿ ಬುದವಾರ ಸಂಜೆಯಿಂದ ಗುರುವಾರ ಇಡೀ ದಿನ ಸುರಿದ ಜಿಟಿಜಿಟಿ ಮಳೆಗೆ ತಾಲ್ಲೂಕಿನಲ್ಲಿ ಅನೇಕ ಮನೆಗಳು ಬಿದ್ದ ವರದಿಯಾಗಿದೆ. ಲಕ್ಷ್ಮೇಶ್ವರ ಸಮೀಪದ ಅಡರಕಟ್ಟಿ ಗ್ರಾಮದಲ್ಲಿ ನಾಲ್ಕು, ಕೊಂಚಿಗೇರಿ ಮತ್ತು ಸೂರಣಗಿಯಲ್ಲಿ ತಲಾ ಒಂದು ಬೆಳ್ಳಟ್ಟಿಯಲ್ಲಿ 2 ಹಾಗೂ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೂರು ಮನೆಗಳು ಬಿದ್ದಿವೆ ಎಂದು ಶುಕ್ರವಾರ ತಹಶೀಲ್ದಾರ ಆರ್.ಡಿ. ಉಪ್ಪಿನ ಲಕ್ಷ್ಮೇಶ್ವರದಲ್ಲಿ ತಿಳಿಸಿದರು.
ಅದರಂತೆ ಹೊಳೆಇಟಗಿ ಮತ್ತು ಬೆಳಗಟ್ಟಿ ಗ್ರಾಮಗಳಲ್ಲಿ ಮಳೆಗೆ ಕುರಿಗಳು ಸಾವಿಗೀಡಾಗಿದ್ದು ಇದರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.