ADVERTISEMENT

ಮಳೆ: ₹2 ಕೋಟಿ ಹಾನಿ ಅಂದಾಜು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 6:47 IST
Last Updated 8 ಅಕ್ಟೋಬರ್ 2017, 6:47 IST

ಗದಗ: ‘ಜಿಲ್ಲೆಯಲ್ಲಿ ಮಳೆ ಅನಾಹುತದಿಂದ ಅಂದಾಜು ₹ 2 ಕೋಟಿಯಷ್ಟು ಹಾನಿಯಾಗಿದೆ. ಏಪ್ರಿಲ್‌ನಿಂದ ಅಕ್ಟೋಬರ್‌ ಮೊದಲ ವಾರದವರೆಗೆ 9 ಜೀವ ಹಾನಿ ಪ್ರಕರಣಗಳು ವರದಿಯಾಗಿದೆ. 1,108 ಮನೆಗಳು ಕುಸಿದಿವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಐ.ಜೆ ಗದ್ಯಾಳ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನವರಿಯಿಂದ ಅಕ್ಟೋಬರ್‌ 7ರವರೆಗೆ ಜಿಲ್ಲೆಯಾದ್ಯಂತ 455 ಮಿ.ಮೀಯಷ್ಟು ಮಳೆಯಾಗಿದೆ. ಮುಂಡರಗಿ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಒಟ್ಟಾರೆ ಶೇ 15ರಷ್ಟು ಮಳೆ ಕೊರತೆಯಾಗಿದೆ. ಗದಗ ಮತ್ತು ರೋಣ ತಾಲ್ಲೂಕುಗಳಲ್ಲಿ ತಲಾ 2, ನರಗುಂದದಲ್ಲಿ 1 ಹಾಗೂ ಶಿರಹಟ್ಟಿಯಲ್ಲಿ 4 ಜೀವ ಹಾನಿ ಪ್ರಕರಣ ವರದಿಯಾಗಿದ್ದು, ತಲಾ ₹ 4 ಲಕ್ಷ ಪರಿಹಾರ ವಿತರಿಸಲಾಗಿದೆ’ ಎಂದರು.

‘ಕೃಷಿ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಬೆಳೆಹಾನಿ ಸಮೀಕ್ಷೆ ನಡೆಸುತ್ತಿದೆ. ಮನೆ ಕುಸಿತ ಮತ್ತು ಜಾನುವಾರು ಸಾವು ಪ್ರಕರಣಗಳಲ್ಲೂ ಪರಿಹಾರ ನೀಡಲಾಗುವುದು. ಮಳೆಯಿಂದ ರೋಣ ತಾಲ್ಲೂಕಿನ ಬೆಣ್ಣಿಹಳ್ಳ ಸುತ್ತಮುತ್ತ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಎದುರಾದರೆ ಅದನ್ನು ಎದುರಿಸಲು ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ’ ಎಂದರು.

ADVERTISEMENT

‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ನಡೆದಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸರ್ಕಾರದ ನಿಯಮಗಳಿಗೆ ಅನುಸಾರವಾಗಿಯೇ ಜಿಲ್ಲಾಡಳಿತ ಭೂಮಿ ಖರೀದಿಸಿ, ಪರಿಹಾರ ನೀಡಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಟಿ.ದಿನೇಶ, ಜಂಟಿ ಕೃಷಿ ನಿರ್ದೇಶಕ ಸಿ.ಬಿ ಬಾಲರೆಡ್ಡಿ, ಜಿಲ್ಲಾ ಪಂಚಾಯತಿ ಯೋಜನಾಧಿಕಾರಿ ಶಂಕರ ಶಂಪೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.