
ಗಜೇಂದ್ರಗಡ: ರೋಣ ತಾಲ್ಲೂಕಿನ ಸೂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಹರ್ಷ ಲಂಕೇಶ ಸಿದ್ಧಗೊಳಿಸಿರುವ ‘ಮಿಸ್ಡ್ ಕಾಲ್ ಆಪರೇಟರ್ ಡಿವೈಸ್’ ಈಗ ಎಲ್ಲರ ಗಮನ ಸೆಳೆಯುತ್ತಿದೆ. ವಿಜ್ಞಾನ ಶಿಕ್ಷಕ ಅಶೋಕ ಉಂಡಿ ಮಾರ್ಗದರ್ಶನದಲ್ಲಿ ಹರ್ಷ ಈ ವಿದ್ಯುತ್ ಚಾಲಿತ ಮಾದರಿ ಅಭಿವೃದ್ಧಿ ಪಡಿಸಿದ್ದಾನೆ.
ಏನಿದು ಮಿಸ್ ಕಾಲ್ಡ್ ಆಪರೇಟರ್ ಡಿವೈಸ್ ?
ಮೊಬೈಲ್ ಫೋನ್‌ನಿಂದ ಈ ಮಾದರಿಯನ್ನು ರಚಿಸಲಾಗಿದೆ. ಮೊಬೈಲ್‌ನಿಂದ ಮಿಸ್ಡ್ ಕಾಲ್ ಕೊಟ್ಟರೆ ವಿದ್ಯುತ್ ಸಂಪರ್ಕ ಕಲ್ಪಿಸಬಹುದು. ಅದೇ ಮಿಸ್ಡ್ ಕಾಲ್ ಮೂಲಕವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಬಹುದಾಗಿದೆ. 12X8 ಇಂಚು ವಿಸ್ತೀರ್ಣದ ಸರ್ಕ್ಯೂಟ್ ಬೋಲ್ಡ್, ಟ್ರಾನ್ಸಿಸ್ಟರ್, ಡೈಯೋಡ್, ಸ್ವಿಚ್, 9 ವೋಲ್ಟ್ ಡಿ.ಸಿ ಬ್ಯಾಟರಿ ಹಾಗೂ ಮೊಬೈಲ್ ಮೂಲಕ ಈ ಮಾದರಿಯನ್ನು ರಚಿಸಲಾಗಿದೆ. ಯಾವುದೇ ಕಂಪೆನಿಯ ಸಿಮ್ ಬಳಸಿ ಈ ಯೋಜನೆಗೆ ಚಾಲನೆ ನೀಡಬಹುದಾಗಿದೆ.
ರಾಜ್ಯದ ಯಾವುದೇ ಪ್ರದೇಶದಲ್ಲಿ ಕುಳಿತು ವಿದ್ಯುತ್ ಸಂಪರ್ಕ ಕಲ್ಪಿಸಬಹುದು ಮತ್ತು ಸ್ಥಗಿತಗೊಳಿಸಬಹುದಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಪ್ರಾಯೋಗಿಕ ಮಾದರಿಯನ್ನು ಸಿದ್ಧಗೊಳಿಸಲಾಗಿದೆ.
ಮಾದರಿಯ ಪ್ರಯೋಜನಗಳು: ವಿದ್ಯುತ್ ಕೊರತೆ ನಿಯಂತ್ರಿಸುವಲ್ಲಿ ಈ ಪ್ರಾಯೋಗಿಕ ಮಾದರಿ ಅನುಕೂಲಕರವಾಗಿದೆ. ಅನಾವಶ್ಯಕವಾಗಿ ಪೋಲಾಗಿ ಹೋಗುವ ಲಕ್ಷಾಂತರ ಯೂನಿಟ್ ವಿದ್ಯುತ್‌ನ್ನು ಈ ಮಾದರಿ ಉಳಿತಾಯ ಮಾಡಬಲ್ಲದು. ಅಷ್ಟೇ ಅಲ್ಲದೆ, ನೂರಾರು ಜನ ಮಾಡಬಹುದಾದ ಕೆಲಸವನ್ನು ಈ ಮಾದರಿಯಿಂದ ಒಬ್ಬರೇ ನಿಯಂತ್ರಿಸಬಹುದಾಗಿದೆ. ಅಲಾರಾಂ ಮೂಲಕ, ಎಸ್‌ಎಂಎಸ್ ಮೂಲಕ ಮಾದರಿ ಕಾರ್ಯನಿರ್ವಹಿಸುತ್ತದೆ ಎಂದು ವಿದ್ಯಾರ್ಥಿ ಹರ್ಷ ಲಂಕೇಶ ಮಾದರಿ ಕುರಿತು ವಿಶ್ಲೇಷಿಸಿದರು.
ಈ ಮಾದರಿಯನ್ನು ಗ್ರಾಮ ಪಂಚಾಯ್ತಿ, ಪುರಸಭೆ, ನಗರ ಸಭೆ, ಮಹಾನಗರ ಪಾಲಿಕೆಗಳಲ್ಲಿ ಅಳವಡಿಸುವುದರಿಂದ ಅನವಶ್ಯಕ ವಿದ್ಯುತ್ ಪೋಲು, ವಿದ್ಯುತ್ ನಿರ್ವಹಣೆಗೆ ಸಂಬಂಧಿಸಿದ ಮಾನವ ಶಕ್ತಿ ಬಳಕೆ, ಅನಿಯಮಿತ ವಿದ್ಯುತ್ ನಿಲುಗಡೆ ತಡೆಯುವುದರ ಜೊತೆಗೆ ಸಮರ್ಪಕ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಉಳಿತಾಯ ಮಾಡಬಹುದು. ನಿಗದಿತ ಕಾಲಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.