ADVERTISEMENT

ಮುಂಗಾರೂ ಇಲ್ಲ... ಹಿಂಗಾರೂ ಇಲ್ಲ...

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 10:10 IST
Last Updated 18 ಅಕ್ಟೋಬರ್ 2012, 10:10 IST

ಲಕ್ಷ್ಮೇಶ್ವರ: ಕಳೆದ ವರ್ಷ ಹಿಂಗಾರು ಬೆಳೆ ಬಾರದೆ ಕಂಗಾಲಾಗಿದ್ದ ರೈತರಿಗೆ ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಬಾರದೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು ಈಗ ರೈತರು ಅಕ್ಷಶಃ ಚಿಂತೆಗೀಡಾಗಿದ್ದಾರೆ.

ಈ ಬಾರಿ ಮುಂಗಾರು ಮಳೆ ಬಾರದೆ ಮೊದಲೇ ರೈತರು ಹೌಹಾರಿದ್ದರು. ಆದರೆ ಹಿಂಗಾರು ಮಳೆಯಾದರೂ ಬರಬಹುದು ಎಂದು ಕನಸು ಕಂಡಿದ್ದ ಅವರ ಕನಸು ಈಗ ಭಗ್ನಗೊಂಡಿದೆ. ಸೆಪ್ಟೆಂಬರ್ ಕೊನೆ ವಾರದಲ್ಲಿ ಹಾಗೂ ಅಕ್ಟೋಬರ್ ಮೊದಲ ವಾರದಲ್ಲಿ ತಾಲ್ಲೂಕಿನಲ್ಲಿ ಅಲ್ಲಲ್ಲಿ ಸ್ವಲ್ಪ ಹಿಂಗಾರು ಮಳೆ ಸುರಿದಿತ್ತು. ಇನ್ನೇನು ಓಡುತ ಮೋಡಗಳು ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿಸಬಹುದು ಎಂದು ನಂಬಿದ ರೈತರು ತರಾತುರಿಯಲ್ಲಿ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಗೋಧಿ, ಕಡಲೆ, ಕುಸುಬಿ, ಬಿಳಿಜೋಳ, ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿದ್ದರು. ಆದರೆ ಎರಡು ವಾರಕಳೆಯುತ್ತಾ ಬಂದರೂ ಈವರೆಗಾದರೂ ಹಿಂಗಾರು ಮಳೆ ದರ್ಶನವೇ ಇಲ್ಲ. ಹೀಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ರೈತರು ಮತ್ತೆ ಆರ್ಥಿಕ ಸಂಕಷ್ಟಕ್ಕೆ ಎದುರಿಸಬೇಕಾಗಿದೆ.

`ಮುಂಗಾರು ಮಳೀನೂ ಕೈ ಕೊಡ್ತು. ಇನ್ನು ಹಿಂಗಾರೂ ಮಳೀನೂ ಬರ ಲಕ್ಷಣಯಿಲ್ಲ. ಹಿಂಗಾದ್ರ ರೈತರ‌್ರು ಹ್ಯಂಗ ಬಾಳಬೇಕು ಎಂದು ಪಟ್ಟಣದ ಪ್ರಗತಿಪರ ರೈತ ಬಸವರಾಜ ಬೆಂಡಿಗೇರ ನೋವಿನಿಂದ ಹೇಳುತ್ತಾರೆ.
ಹಿಂಗಾರು ಮಳೆ ಆಗಿದ್ದರೆ ಬಳ್ಳಿಶೇಂಗಾ, ಬಿಟಿಹತ್ತಿ ಸೇರಿದಂತೆ ಮತ್ತಿತರ ಹಿಂಗಾರು ಬೆಳೆಗಳಾದರೂ ಬೆಳೆಯುತ್ತಿದ್ದವು. ಆದರೆ ಈಗ ಎರಡೂ ಹಂಗಾಮನ ಮಳೆ ಕೈಕೊಟ್ಟಿದ್ದು ರೈತರಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ. ಹಿಂಗಾರ ಮಳ ಬಂದಿದ್ರ ಬಿಳೇಜ್ವಾಳ ಕೋಟಾಗಸೊಪ್ಪಿನೂ ಬರ‌್ತಿತ್ತು. ಆದ್ರ ಮಳೀನ ಇಲ್ಲ.  ಈ ವರ್ಷ ನಮ್ಮ ದನಕರಾ ಸಾಕದ ದೊಡ್ಡ ತಲಿನೋವು ಆಗತೈತಿ ಎಂದು ಶಿಗ್ಲಿ ಗ್ರಾಮದ ಸಾಯವಯ ರೈತರಾದ ಶಿವಾನಂದ ಮೂಲಿಮನಿ ಹಾಗೂ ಲಕ್ಷ್ಮೇಶ್ವರದ ಕಾಶಪ್ಪ ಗುರಿಕಾರ ಚಿಂತೆ ಮಾಡುತ್ತಾರೆ.

ಲಕ್ಷ್ಮೇಶ್ವರ ಹೋಬಳಿಯ 46 ಸಾವಿರ ಹೆಕ್ಟೇರ್ ಪ್ರದೇಶ ಸೇರಿದಂತೆ ಶಿರಹಟ್ಟಿ ತಾಲ್ಲೂಕಿನಲ್ಲಿ ಒಟ್ಟು 70 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶ ಇದೆ. ಆದರೆ ಪ್ರಸ್ತುತ ವರ್ಷ ಇಡೀ ತಾಲ್ಲೂಕಿನಲ್ಲಿ ಎಲ್ಲಿಯೂ ಮಳೆ ಸರಿಯಾಗಿ ಆಗಿಲ್ಲ.

ಕಳೆದ ವರ್ಷ ಹಿಂಗಾರು ಹಂಗಾಮಿಗಾಗಿ ರೈತರು 5325 ಹೆಕ್ಟೇರ್ ಬಿಳಿಜೋಳ ಹಾಗೂ 645 ಹೆಕ್ಟೇರ್‌ನಲ್ಲಿ ಸುಧಾರಿತ ಜೋಳ, ಗೋವಿನಜೋಳ 110 ಹೆಕ್ಟೇರ್, 1785 ಹೆಕ್ಟೇರ್‌ನಲ್ಲಿ ಕಡ್ಲಿ, 2610 ಹೆಕ್ಟೇರ್‌ನಲ್ಲಿ ಹತ್ತಿ, 115 ಹೆಕ್ಟೇರ್‌ನಲ್ಲಿ ಈರುಳ್ಳಿ ಹಾಗೂ 550 ಹೆಕ್ಟೇರ್‌ನಲ್ಲಿ ಇತರೇ ಬೆಳೆ ಸೇರಿದಂತೆ ಒಟ್ಟು 13, 500 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದರು. ಆದರೆ ಈ ಬಾರಿ ಕೇವಲ ಕೈಬೆರಳೆಣಿಕೆಯಷ್ಟು ರೈತರು ಬಿತ್ತನೆ ಮಾಡಿದ್ದಾರೆ.

ಮಳೆರಾಯನ ಮುನಿಸು ಕೇವಲ ಬೆಳೆಗಳ ಮೇಲಷ್ಟೆ ಆಗದೆ ಜೋಳ ಸೇರಿದಂತೆ ಇತರೇ ಧಾನ್ಯಗಳ ಬೆಲೆ ಹೆಚ್ಚಾಗಲು ಕಾರಣವಾಗಿದೆ. ಈಗಾಗಲೇ ಪೇಟೆಯಲ್ಲಿ ವಿಜಾಪುರ ಬಿಳಿಜೋಳದ ಬೆಲೆ ಕೆಜಿಗೆ 30 ರೂಪಾಯಿ ಇದ್ದು ಬಡವರು ಜೋಳದ ಬೆಲೆ ಕೇಳಿಯೇ ಮೂರ್ಛೆ ಹೋಗುವಂತಾಗಿದೆ.

ಜ್ವಾಳ ಇಲ್ಲದ ನಮ್ಗ ಊಟಿಲ್ಲ. ಆದ್ರ ಈಗ ಜ್ವಾಳದ ರೇಟ್ ಕೇಳಿದ್ರ ಸಾಕ ತಲಿ ತಿರಗತೈತಿ ಎಂದು ಪಟ್ಟಣದ ಈಶ್ವರಪ್ಪ ಹುಳ್ಳಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಒಟ್ಟಿನಲ್ಲಿ ಈ ವರ್ಷ ಮುಂಗಾರು ಹಿಂಗಾರು ಕೈಕೊಟ್ಟಿದ್ದು ಬರಗಾಲದ ಭೀಕರತೆ ಹೆಚ್ಚಾಗುವ ಲಕ್ಷಣಗಳು ಈಗಾಗಲೇ ಕಂಡು ಬರುತ್ತಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.