ADVERTISEMENT

`ಮೂಲಭೂತ ವಾದ ಸಮಾಜಕ್ಕೆ ಅಪಾಯ'

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 9:33 IST
Last Updated 2 ಆಗಸ್ಟ್ 2013, 9:33 IST

ಗಜೇಂದ್ರಗಡ: ಯಾವುದೇ ಧರ್ಮದಲ್ಲಿ ಮೂಲಭೂತವಾದ ದೊಡ್ಡ ಅಪಾಯಕಾರಿ ಸಂಗತಿ ಎಂದು ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಗುರುವಾರ ಇಲ್ಲಿನ ಜಗದ್ಗುರು ತೋಂಟದಾರ್ಯ ಪ್ರಾಥಮಿಕ ಶಾಲೆಯ ಆವರಣದಲ್ಲಿನ ನೂತನ ಲಿಂಗ ಪೂಜಾ ಮಂದಿರ `ಅಲ್ಲಮನ ಕುಟೀರ' ಉದ್ಘಾಟಿಸಿ ಮಾತನಾಡಿದ ಅವರು, ಮೂಲಭೂತ ವಾದದಲ್ಲಿ ಸಮಾನತೆಗೆ ಅರ್ಥವಿರುವುದಿಲ್ಲ. ಮೂಲಭೂತ ವಾದಗಳು ತಮ್ಮದೇಯಾದ ದೃಷ್ಟಿಕೋನದಲ್ಲಿ ಧರ್ಮವನ್ನು ಅರ್ಧೈಸುತ್ತಾ ಹೋಗುತ್ತವೆ. ಹೀಗಾಗಿ ಮೂಲಭೂತ ವಾದಕ್ಕಿಂತ ಸಮಾಜತೆ ಸಾರುವ ಧರ್ಮದ ಅವಶ್ಯಕತೆ ಪ್ರಸ್ತುತ ಸಮಾಜಕ್ಕಿದೆ. ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಉಂಟಾಗಿರುವ ಒಡಕನ್ನು ಸರಿಪಡಿಸಿ ಸಮಾಜದಲ್ಲಿ ಸಮಾನತೆ ಸಾರಬೇಕಾದರೆ ಸಮತಾವಾದದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಭಾರತೀಯ ಸಂಸ್ಕೃತಿಯಲ್ಲಿ ಅನೇಕ ವೈವಿಧ್ಯತೆಗಳಿವೆ. ಇದರಲ್ಲಿ ಹೇಳಿದಂತೆ ನಡೆದುಕೊಳ್ಳುವುದಿಲ್ಲ. ಸಂಸ್ಕೃತಿಯಲ್ಲಿನ ವೈವಿಧ್ಯತೆಗಳನ್ನು ಕಾರ್ಯಗತಗೊಳಿಸಿದರೆ ವೈಭವ ಪ್ರೇರಿತ ಭಾರತೀಯ ಸಂಸ್ಕೃತಿಯನ್ನು ಮರುಕಳಿಸಬಹುದಾಗಿದೆ ಎಂದು ಹೇಳಿದರು.

ಭಾರತೀಯ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳಿಗೆ ವಿಶ್ವ ಮಾನ್ಯತೆ ಇದೆ. ಹೀಗಿದ್ದರೂ ಈಚಿಗಿನ ಕೆಲ ವರ್ಷಗಳಿಂದ ಆಧುನಿಕತೆಯ ಪ್ರಭಾವ ಭಾರತೀಯ ಸಂಸ್ಕೃತಿಯ ಮೇಲೆ ಬೀರಿದೆ. ಇಂತಹ ಪ್ರಭಾವಗಳಿಂದಾಗಿ ತಲೆಮಾರುಗಳ ಹಿರಿಮೆಯನ್ನು ಹೊಂದಿರುವ ಐತಿಹಾಸಿಕ, ಪೌರಾಣಿಕ, ಅಧ್ಯಾತ್ವ ಹಿನ್ನೆಲೆ ಹೊಂದಿರುವ ವೈವಿಧ್ಯಮಯ ಭಾರತೀಯ ಸಂಸ್ಕೃತಿ ಹಿನ್ನಡೆ ಉಂಟಾಗಿದೆ ಎಂದರು.

ತ್ಯಾಗ, ದಾನ, ಉದಾರತೆಗೆ ಹೆಸರು ಮಾಡಿದ್ದ ಭಾರತೀಯ ಸಂಸ್ಕೃತಿಯಲ್ಲಿ ತ್ಯಾಗ, ದಾನ ಗುಣ, ಅಂತಃಕರಣದಂತಹ ಉದಾರ ಗುಣಗಳು ಕ್ಷೀಣಿಸಲಾರಂಭಿಸಿವೆ. ಪರಿಣಾಮ ಸಮಾಜದಲ್ಲಿ ಅಸಹಾಯಕರ ಸಂಖ್ಯೆ ವೃದ್ಧಿಯಾಗುತ್ತಿದೆ. ಶಿರಸಂಗಿ ಲಿಂಗರಾಜರಂತಹ ಉದಾತ್ ದಾನಿಗಳನ್ನು ಹೊಂದಿದ ಉತ್ತರ ಕರ್ನಾಟಕದಲ್ಲಿ ಅನ್ನದಾಸೋಹ, ಜ್ಞಾನದಾಸೋಹ, ರಕ್ತ ದಾಸೋಹಗಳು ಕಣ್ಮರೆಯಾಗುತ್ತಿವೆ ಎಂದರು.

ಮಹಿಳಾ ಸ್ವಾತಂತ್ರ್ಯ ಎನ್ನುವುದು ಪ್ರಪಂಚದ ಸ್ತ್ರೀಕರಣ ಮಾನಸಿಕ ಹಾಗೂ ದೈಹಿಕ ಬಲವನ್ನು ಪುರುಷ ತತ್ವ ಆಳುತ್ತಿದೆಯಾದರೂ ಸ್ವತಂತ್ರ ಸಮಾಜವು ಈ ತತ್ವದ ನಿರಾಕರಣೆಯಾಗಿದೆ. ಅಂತೆಯೇ ಮಹಿಳೆಯರ ಶಕ್ತಿ-ಸಾಮರ್ಥ್ಯಗಳಲ್ಲಿ ಆಹಾರ ನಂಬಿಕೆ ಹೊಂದಿದ್ದ ನಮ್ಮ ದೇಶದ ಸ್ವಾತಂತ್ರ್ಯ ಆಂದೋಲನವನ್ನು ಸ್ತ್ರೀಕರಣಗೊಳಿಸಲು ಮುಂದಾದರು. ಇದರ ಭಾಗವಾಗಿಯೇ ಆ್ಯನಿಬೆಸೆಂಟ್, ಸರೋಜಿನಿ ನಾಯ್ಡು ಮಹಿಳಾ ನಾಯಕಿಯರಾಗಲು ಸಾಧ್ಯವಾಯಿತು ಎಂದರು.

ಮಹಿಳೆಯರನ್ನು ಸಭ್ಯತೆ ಹಾಗೂ ಅಹಿಂಸೆಯ ರೂಪಕವಾಗಿ ಕಂಡ ಗಾಂಧಿಜೀ ಸ್ವಾತಂತ್ರ್ಯ ಚಳವಳಿಯಲ್ಲಿ ಬಹುಪಾಲು ಮಹಿಳೆಯರು ಪಾಲ್ಗೊಂಡು ಅದಕ್ಕೊಂದು ಸಭ್ಯತೆ ಹಾಗೂ ಅಹಿಂಸೆಯ ಸ್ವರ್ಶ ನೀಡುವುದೇ ಆಗಿತ್ತು. ಬಾಳಿಗೆ ಕವಿದ ಭೌತಿಕ ಅಂಧಕಾರವನ್ನು ಹಾಗೂ ಬೌದ್ಧಿಕ ಅಂಧಕಾರವನ್ನು ದೂರ ಮಾಡುವ ಶಕ್ತಿ ಮಹಿಳೆ. ಮಗು ತನ್ನ ವ್ಯಕ್ತಿತ್ವದ ಪ್ರಚಂಡ ಶಕ್ತಿಯನ್ನು ಪ್ರಕಟಗೊಳಿಸುವಲ್ಲಿ ಮಹಿಳೆಯ ಪಾತ್ರ ಅನನ್ಯ. ಸಾಮಾಜಿಕ ಸಾಂಪ್ರದಾಯಗಳ ಎಲ್ಲೆಯಲ್ಲಿ ಸ್ವಾತಂತ್ರ್ಯದಂತಹ ಮೌಲ್ಯಗಳನ್ನು ಪುಷ್ಠೀಕರಿಸುವ ಕಾರ್ಯವನ್ನು ಮಹಿಳೆ ಮಾಡುತ್ತಾ ಬಂದಿದ್ದಾಳೆ ಎಂದರು.

ಇದೇ ಸಂದರ್ಭದಲ್ಲಿ ನೂತನ ಕೊಠಡಿಗಳ ದಾನಿಗಳಾದ ಬಸವರಾಜ ವಾಲಿ, ಗಿರಿಜಮ್ಮ ಮ್ಯಾಗೇರಿ, ಗೌರಾದೇವಿ ಸಿನ್ನೂರ ಇವರುಗಳನ್ನು ಸನ್ಮಾನಿಸಲಾಯಿತು.

ಶಿರೋಳ ಚಿಂಚಿಣಿ ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ, ಬೈರನಹಟ್ಟಿಯ ದೊರೆ ಸಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಸ್ಥಳೀಯ ಸಂಸ್ಥೆಯ  ಎಸ್. ಎಲ್.ಹಿರೇಮನಿ  ಅಧ್ಯಕ್ಷತೆ ವಹಿಸಿದ್ದರು.
ಡಾ.ಬಿ.ವಿ. ಕಂಬಳ್ಯಾಳ, ಎಸ್.ಎಸ್.ಪಟ್ಟೇದ, ಬಿ.ಎಂ. ಸಜ್ಜನರ, ಅಶೋಕ ಹೊನವಾಡ, ಕಲ್ಲಪ್ಪ ಸಜ್ಜನರ, ಮಾಧುರಾವ್ ಚವ್ಹಾಣ, ವೀರೇಶ ನಂದಿಹಾಳ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.