ADVERTISEMENT

ರಂಗಭೂಮಿಯಿಂದ ಸಮನ್ವಯತೆ:ಕಲ್ಲಯ್ಯಜ್ಜ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2011, 8:30 IST
Last Updated 28 ಮಾರ್ಚ್ 2011, 8:30 IST
ರಂಗಭೂಮಿಯಿಂದ ಸಮನ್ವಯತೆ:ಕಲ್ಲಯ್ಯಜ್ಜ
ರಂಗಭೂಮಿಯಿಂದ ಸಮನ್ವಯತೆ:ಕಲ್ಲಯ್ಯಜ್ಜ   

ಗದಗ: ಸಾಮಾಜಿಕ ಪರಿವರ್ತನೆ ಹಾಗೂ ಸುಧಾರಣೆಯ ನಿಟ್ಟಿನಲ್ಲಿ ರಂಗಭೂಮಿ ಶಾಂತಿ, ಸಮನ್ವಯತೆಯನ್ನು ಪ್ರತಿಪಾದಿಸಿ ಮುನ್ನೆಡೆಸುತ್ತಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು. ಸ್ಥಳೀಯ ಬಣ್ಣದಮನೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ವೀರೇಶ್ವರ ಪುಣ್ಯಾಶ್ರಮದ ಆಶ್ರಯದಲ್ಲಿ ಭಾನುವಾರ ನಡೆದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 

ರಂಗಭೂಮಿಯ ಚಟುವಟಿಕೆಗಳಲಲಿ ಎಲ್ಲರೂ ಪಾಲ್ಗೊಂಡು ್ಮನ ಪೂರ್ವಕವಾಗಿ ಭಾಗವಹಿಸಬೇಕು. ಗುರುಗಳಾದ ಪಂ. ಪುಟ್ಟರಾಜ ಕವಿ ಗವಾಯಿಗಳವರು ರಂಗಭೂಮಿಯ ಮೂಲಕ ಭಕ್ತಿ, ಧರ್ಮದ ಸಂದೇಶಗಳನ್ನು ಬಿತ್ತರಿಸುವಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು. ಆರ್.ಎನ್. ಕುಲಕರ್ಣಿ ಮಾತನಾಡಿ, ಬುದ್ಧಿಜೀವಿಗಳು, ಹವ್ಯಾಸಿ ನಾಟಕಗಳನ್ನು ಸಂಘಟಿಸಿ ನಿರ್ದೇಶನ ನೀಡುವಲ್ಲಿ ಸದಾ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
 

ದಾವಣಗೆರೆಯ ಕೆಬಿಆರ್ ನಾಟಕ ಕಂಪನಿ ಮಾಲೀಕ ಚಿಂದೋಡಿ ಶ್ರೀಕಂಠೇಶ, ಭಾರತಿ ಶಿರಹಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬಾಹುಬಲಿ ಜೈನರ ಹಾಗೂ ಶ್ರೀದೇವಿ ಶಿರಹಟ್ಟಿ ರಂಗಗೀತೆಗಳನ್ನು ಹಾಡಿದರು. ವಿಜಯ ಲಲಿತ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾಕ್ರೆಟಿಸ್ ನಾಟಕ ಪ್ರದರ್ಶನ ನೀಡಿದರು. ಅನ್ನದಾನಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯ ಕಿರೇಸೂರ ಸ್ವಾಗತಿಸಿದರು. ಬಾಹುಬಲಿ ಕಾರ್ಯಕ್ರಮ ನಿರೂಪಿಸಿದರು. ಪಿ.ಬಿ. ಬಂಡಿ ವಂದಿಸಿದರು.
 

ADVERTISEMENT

ರಂಗಮಂದಿರ ಸ್ಥಾಪನೆಗೆ ಒತ್ತಾಯ
ರಂಗಭೂಮಿಯ ಹಿನ್ನೆಲೆಯುಳ್ಳ ಗದಗ ನಗರದಲ್ಲಿ ರಂಗಮಂದಿರ ಸ್ಥಾಪಿಸುವಂತೆ ನಾಟಕಕಾರ ಸಿ.ಜಿ.ಬಿ ಹಿರೇಮಠ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಸ್ಥಳೀಯ ನಂದೀಶ್ವರ ಮಠದಲ್ಲಿ ಭಾನುವಾರ ನಾಡಕವಿ ಹುಯಿಲಗೋಳ ನಾರಾಯಣರಾವ್ ಕಲಾ ಮತ್ತು ಸಂಸ್ಕೃತಿ ಹಾಗೂ ಜನಜಾಗೃತಿ ಚಿಂತನ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವರಂಗಭೂಮಿಯ ದಿನಾಚರಣೆ ಕಾರ್ಯಕ್ರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 

‘ಕಲಾವಿದರು ತಮ್ಮ ದುಃಖವನ್ನು ಬದಿಗಿಟ್ಟು ಪ್ರೇಕ್ಷಕರಿಗೆ ಸಂತೋಷವನ್ನು ನೀಡುತ್ತಾರೆ. ಅವರು ಕಲೆಯಲ್ಲಿ ಎಷ್ಟೇ ಶ್ರೀಮಂತರಾಗಿದ್ದರೂ ಕೂಡಾ ಆರ್ಥಿಕವಾಗಿ ಅತ್ಯಂತ ದುರ್ಬಲರಾಗಿದ್ದಾರೆ. ಸರ್ಕಾರ ಕೂಡಲೇ ಕಲಾವಿದರ ರಕ್ಷಣೆಗೆ ಮುಂದಾಗುವ ಅಗತ್ಯವಿದೆ’ ಎಂದು ತಿಳಿಸಿದರು. ಬಿ. ಬಾಬು ಮಾತನಾಡಿ, ‘ರಂಗಭೂಮಿ ಒಂದು ಪ್ರಭಲವಾದ ಮಾಧ್ಯಮವಾಗಿದೆ. ಪ್ರಗತಿಪರ ಸಮಾಜಕ್ಕೆ ರಂಗಭೂಮಿಯ ಕೊಡುಗೆ ಅಪಾರ. ಸರ್ಕಾರ ಕಲಾವಿದರನ್ನು ಕಡೆಗಣಿಸಬಾರದು’ ಎಂದು ಮನವಿ ಮಾಡಿದರು. ‘ನಾಡು, ನುಡಿ ರಂಗಭೂಮಿಯನ್ನು ಕಾಪಾಡಿಕೊಳ್ಳುವ ಹಾಗೂ ಜನಜಾಗೃತಿ ಮೂಡಿಸುವ ಸಪ್ತಾಹ ಹಮ್ಮಿಕೊಳ್ಳಬೇಕು’ ಎಂದು ಉಪನ್ಯಾಸಕ ಗಂಗಾಧರ ಹಿಡ್ಕಿಮಠ ಹೇಳಿದರು.
 

ಬಸಯ್ಯ ಬಣಕಾರ ಉದ್ಘಾಟಿಸಿದರು. ಶಿಕ್ಷಕ ಡಿ.ಎಂ. ಕೆರೂರ, ಕಲಾವಿದ ಪರಮೇಶ್ವರಪ್ಪ ಪಡೇಸೂರ, ಕುತ್ಬುದ್ದೀನ್ ಖಾಜಿ, ನಿಸಾರ್ ಅಹ್ಮದ್ ಖಾಜಿ, ವೀರಾದೇವಿ ಮಳಗಿ, ಯಶೋಧಾ ಬಳ್ಳಾರಿ ಮತ್ತಿತರರು ಹಾಜರಿದ್ದರು. ಕಲಾವಿದ ಶಿವಾನಂದ ಯರಗುಪ್ಪಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.