ADVERTISEMENT

ರಸ್ತೆ ಆವರಿಸಿದ ಜಾಲಿ: ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 10:05 IST
Last Updated 17 ಫೆಬ್ರುವರಿ 2011, 10:05 IST

ಮುಳಗುಂದ: ಮೊದಲೇ ಇಕ್ಕಟ್ಟಾದ ರಸ್ತೆ, ಅಲ್ಲಲ್ಲಿ ಬಿದ್ದಿರುವ ತೆಗ್ಗು ದಿನ್ನೆಗಳು ಸೇರಿಕೊಂಡು ವಾಹನ ಚಲಾಯಿಸುವುದೇ ದುಸ್ತರವಾಗಿರು ವಾಗ ರಸ್ತೆಯ ಎರಡೂ ಮಗ್ಗುಲಲ್ಲೂ ಬೆಳೆದಿರುವ ಮುಳ್ಳಿನ ಜಾಲಿ ರಸ್ತೆಯನ್ನೇ ನುಂಗಿ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.   

ಪಟ್ಟಣದಿಂದ ಬಸಾಪುರ, ಖಾನಾಪೂರ ಮೂಲಕ ಶಿರಹಟ್ಟಿಗೆ ತೆರಳುವ ಮಾರ್ಗ ಮಧ್ಯದಲ್ಲಿ ರಸ್ತೆ ಬದಿಗೆ ಬೆಳೆದಿರುವ ಜಾಲಿಕಂಟಿಗಳು ಅಪಾಯಕ್ಕೆ ಅಹ್ವಾನ ನೀಡುತ್ತಿರುವುದು ನಿತ್ಯ ಇಲ್ಲಿನ ವಾಸ್ತವವಾಗಿದೆ.

ಶಿರಹಟ್ಟಿಯಿಂದ ಪಟ್ಟಣಕ್ಕೆ ತಲುಪಲು ಸನ್ನಿಹದ ಒಳ ರಸ್ತೆ ಇದಾಗಿದೆ. ಇದೇ ಮಾರ್ಗವಾಗಿ ಹುಬ್ಬಳ್ಳಿ ಹಾಗೂ ಗದಗ ನಗರಗಳಿಗೆ ಹೆಚ್ಚಿರುವ ಬಸ್ ಸೌಲಭ್ಯದಿಂದ ಪ್ರಯಾಣಿಕರಿಗೆ ಅನುಕೂಲವೇನೊ ಆಗಿದೆ. ಆದರೆ ಮಾರ್ಗದ ಅಲ್ಲಲ್ಲಿ ರಸ್ತೆ ಬದಿಗೆ ಮುಗಿಲೆತ್ತರಕ್ಕೆ ಬೆಳೆದಿರುವ ಮುಳ್ಳಿನ ಕಂಟಿಗಳು ಸಂಪೂರ್ಣ ರಸ್ತೆಗೆ ವಾಲಿಕೊಂಡು, ಎದುರು ಬರುವ ವಾಹನಗಳೇ ಕಾಣಿಸದಂತಾಗಿ ವಾಹನ ಚಾಲನೆಗೆ  ತೊಂದರೆಯಾಗಿದ್ದು, ಇತರ ವಾಹನಗಳಿಗೆ ದಾರಿಕೊಡಲು ಚಾಲಕರು ಹರಸಾಹಸ ಪಡುವಂತಾದರೆ, ಪ್ರಯಾಣಿಕರು ಸಹ ಭಯದ ನೆರಳಲ್ಲಿಯೇ ಪ್ರಯಾಣಿಸುವ ಅನಿವಾರ್ಯತೆ ಉಂಟಾಗಿದೆ.

ಹದಗೆಟ್ಟ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಂಚರಿಸುವ ಉಸುಕಿನ ಲಾರಿ, ಬಸ್, ಟೆಂಪೋ ಟ್ರಾಕ್ಸ್, ಟಂಟಂ ವಾಹನಗಳ ಸಂಚಾರ ಭರಾಟೆಗೆ ತಕ್ಕಂತೆ ರಸ್ತೆ ಬದಿಗೆ ದಿನೇ ದಿನೇ ಆಕಾಶದೆತ್ತರಕ್ಕೆ ಬೆಳೆಯುತ್ತಿರುವ ಜಾಲಿಯ ಕಂಟಿ ಒಂದಿಲ್ಲೊಂದು ರಸ್ತೆ ಅವಘಡಗಳನ್ನು ಸೃಷ್ಠಿಸಲು ಕಾರಣವಾಗಿದೆ ಎನ್ನುವುದು ವಾಹನ ಚಾಲಕರ ಹಾಗೂ ಪ್ರಯಾಣಿಕರ ಆಕ್ರೋಶವಾಗಿದೆ.  

ಕೂಡಲೇ ಸಂಬಂಧಿಸಿದವರು ಮುಖ್ಯ ರಸ್ತೆಯ ಬದಿಗೆ ಬೆಳೆದಿರುವ ಜಾಲಿ ಕಂಟಿಗಳನ್ನು ತೆರವುಗೊಳಿಸಿ, ಅಲ್ಲಿಲ್ಲಿ ಬಿದ್ದಿರುವ ತೆಗ್ಗುದಿನ್ನೆಗಳನ್ನು ದುರಸ್ಥಿಗೊಳಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಮುಂದಾಗುವರೇ ಎನ್ನುವುದು ಅಲ್ಲಿನ ಪ್ರಯಾಣಿಕರ ಹಾಗೂ ನಾಗರಿಕರ ಪ್ರಶ್ನೆಯಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.