ADVERTISEMENT

ರೈತರಿಂದ ಅಧಿಕಾರಿಗಳಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 8:15 IST
Last Updated 13 ಅಕ್ಟೋಬರ್ 2011, 8:15 IST
ರೈತರಿಂದ ಅಧಿಕಾರಿಗಳಿಗೆ ತರಾಟೆ
ರೈತರಿಂದ ಅಧಿಕಾರಿಗಳಿಗೆ ತರಾಟೆ   

ನರಗುಂದ: ರೈತರಿಗೆ ತಿಳಿಸದೇ ಪೈಪ್ ಲೈನ್ ಅಳವಡಿಸಿ ಬೆಳೆ ಹಾಗೂ ಭೂ ಹಾನಿಗೆ ಕಾರಣವಾಗಿದ್ದರಿಂದ ಆಕ್ರೋಶಗೊಂಡ ರೈತರು ಬುಧವಾರ ಮಿನಿ ವಿಧಾನಸೌಧದಲ್ಲಿ ನಡೆದ ರೈತರ ಹಾಗೂ ಗೇಲ್ ಕಂಪೆನಿಯ ಸಹಾಯಕ ಆಯಕ್ತರ ನಡುವೆ ಸಭೆಯಲ್ಲಿ ವಾಗ್ವಾದ ನಡೆಯಿತು.

ತಾಲ್ಲೂಕಿನ ಹುಣಸಿಕಟ್ಟಿ, ಗುರ್ಲಕಟ್ಟಿ, ಕಲಕೇರಿ ಗ್ರಾಮಗಳಲ್ಲಿ ಗೇಲ್ ಇಂಡಿಯಾ ಗ್ಯಾಸ್ ಕಂಪೆನಿ ಕಾಮಗಾರಿ ಆರಂಭಿಸಿ ಹಲವಾರು ತಿಂಗಳು ಗತಿಸಿವೆ. ಎರಡು ಹಿಂಗಾರಿ ಒಂದು ಮುಂಗಾರಿ ಬೆಳೆಗಳು ಹಾಳಾಗಲಿಕ್ಕೆ ಕಂಪೆನಿ ಕಾರಣವಾಗಿದೆ. ಇದರ ಬಗ್ಗೆ ಇಲ್ಲಿಯವೆರೆಗೂ ಸಂಪೂರ್ಣ ಪರಿಹಾರವನ್ನು ನೀಡಿಲ್ಲ. ರೈತರೊಡನೆ  ಚೆಲ್ಲಾಟ ನಡೆಸುತ್ತಿದೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಯಿತು.

ಆಗ ಮಧ್ಯ ಪ್ರವೇಶಿಸಿದ ಗೇಲ್ ಇಂಡಿಯಾ ಕಂಪೆನಿ ರಾಜ್ಯ ಸಹಾಯಕ ಆಯುಕ್ತ ಎಸ್. ಸೂರ್ಯನಾರಾಯಣ ` ಈಗಾಗಲೇ ತಮ ಸಮಸ್ಯೆ ಆಲಿಸಿದ್ದು ಈ ಕಾಮಗಾರಿಗೆ ಹಾನಿಗೊಂಡ ಭೂಮಿಯನ್ನು ಪುನರ್ ಸಮೀಕ್ಷೆ ಮಾಡುವ ಮೂಲಕ ಕಾನೂನಾತ್ಮಕ ಪರಿಹಾರ ನೀಡುವುದಾಗಿ ಹೇಳಿದಾಗ ರೈತರು ಮತ್ತಷ್ಟು ಆಕ್ರೋಶಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರಾದ ಬಿ.ಸಿ. ಹೆಬ್ಬಳ್ಳಿ ಹಾಗೂ  ಗಂಗಾಧರ ಮೇಟಿ ~ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ  ಜಿಲ್ಲೆಯಲಿ ಒಂದು ಗುಂಟೆ ಹತ್ತಿ ಬೆಳೆ ಹಾನಿಗೆ ರೂ 1670 ನೀಡಿದರೆ ನಮ್ಮ ಗ್ರಾಮದಲ್ಲಿ ಅದೇ ಬೆಳೆಗೆ ಕೇವಲ ರೂ 150 ನೀಡಿದೆ. ಇದರಿಂದ ಸಮೀಕ್ಷೆ ಸರಿಯಾಗಿ ನಡೆದಿಲ್ಲ. ಜೊತೆಗೆ ಕೆಲವು ರೈತರಿಗೆ ಚೆಕ್ ನೀಡಿದರೆ ಕೆಲವರಿಗೆ ನೀಡಿಲ್ಲ. ಆದ್ದರಿಂದ ಸರಿಯಾಗಿ ಸಮೀಕ್ಷೆಯಾಗಿ ಎಲ್ಲರಿಗೂ ಪರಿಹಾರ ನೀಡುವವರೆಗೂ ಕಾಮಗಾರಿ ನಡೆಯಲು ಬಿಡುವುದಿಲ್ಲವೆಂದು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಆಯುಕ್ತ ಸೂರ್ಯನಾರಾಯಣ ` ಈ ಮೊದಲು  ಭೂ ಹಾನಿಗೆ ಕಡಿಮೆ ಪರಿಹಾರ ಘೋಷಿಸಲಾಗಿತ್ತು. ಕೆಲವು ದಿನಗಳ ಹಿಂದೆ ಗದುಗಿನಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಒಂದು ಗುಂಟೆಗೆ ರೂ 550 ಪರಿಹಾರ ನೀಡುವುದಾಗಿ ಹೇಳಿದರು. ಬೆಳೆ ಹಾನಿ ಬಗ್ಗೆ ಕೃಷಿ ಇಲಾಖೆ ಮೂಲಕ ಚರ್ಚಿಸಿ ನಿಗದಿತ ಪರಿಹಾರ ನೀಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಗೇಲ್ ಇಂಡಿಯಾ ಕಂಪೆನಿಯ ರಾಜು ಶರ್ಮಾ, ಮನೋಹರ ಜೋಷಿ, ಗೋಣೆಪ್ಪನವರ, ವಕೀಲ ಸಿ.ಎಸ್. ಪಾಟೀಲ. ರೈತ ಸಂಘದ ಗಂಗಾಧರ  ಮೇಟಿ, ಕಗದಾಳನ ವೆಂಕರೆಡ್ಡಿ, ಉಮೇಶ ಲದ್ದಿ ಇತರರು ಭಾಗವಹಿಸಿದ್ದರು.

ಸಮುದಾಯ ಆರೋಗ್ಯ ದಿನಾಚರಣೆ
ಶಿರೋಳ: `ಮಾರಕ ರೋಗಗಳಿಂದ ಮಕ್ಕಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಅಗತ್ಯ ಲಸಿಕೆ ಹಾಕಿಸಬೇಕು ಎಂದು ವೈದ್ಯಾಧಿಕಾರಿ ಡಾ. ಬಿ.ಕೆ. ನದಾಫ್ ಹೇಳಿದರು.

ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಏರ್ಪಡಿಸಿದ್ದ ಸಮುದಾಯ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಯಿಂದಿರು ಮಕ್ಕಳಿಗೆ ಯಾವ ಯಾವ ಲಸಿಕೆಗಳನ್ನು ಕೊಡಿಸಬೇಕು ಎಂಬುದನ್ನು ಮೊದಲು ತಿಳಿದುಕೊಂಡಿರಬೇಕು ಎಂದು ಅವರು ಸಲಹೆ ನೀಡಿದರು.

ಶಾಂತವ್ವ ದಂಡಿನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಾರವ್ವ ಹಡಗಲಿ, ಪ್ರಭು ಅಂಕಲಿಮಠ, ಪ್ರಕಾಶಗೌಡ ತಿರಕನಗೌಡ್ರು ಅತಿಥಿಗಳಾಗಿ ಭಾಗವಹಿಸಿದ್ದರು. ಜೆ.ಬಿ. ಕೋಡಿಹಳ್ಳಿ ನಿರೂಪಿಸಿದರು. ಪಿ.ಟಿ. ಪತಂಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.