ADVERTISEMENT

ಲಕ್ಕುಂಡಿ ಎಪಿಎಂಸಿ ಉಪಚುನಾವಣೆ: ಸಿದ್ಧಲಿಂಗೇಶಗೌಡ ಪಾಟೀಲಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 6:15 IST
Last Updated 5 ಜುಲೈ 2012, 6:15 IST

ಗದಗ: ತಾಲ್ಲೂಕಿನ ಲಕ್ಕುಂಡಿ ಕೃಷಿ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿದ್ದಲಿಂಗೇಶಗೌಡ ಪಾಟೀಲ ಅವರು 1,225 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಎಪಿಎಂಸಿ ಸದಸ್ಯ ಅಜ್ಜಣ್ಣ ಪಾಟೀಲ ಅವರ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನರಗುಂದ ಮತ್ತು ರೋಣ ವಿಧಾನಸಭೆಯ ವ್ಯಾಪ್ತಿಗೆ ಒಳಪಡುವ ಕೃಷಿ ಕ್ಷೇತ್ರವು ಪ್ರತಿಷ್ಠೆಯ ಕಣವಾಗಿ ರೂಪುಗೊಂಡಿತ್ತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾಗುವ ಮೂಲಕ ವಿಜಯ ಸಾಧಿಸಿದರು.

ಲಕ್ಕುಂಡಿ ಕೃಷಿ ಕ್ಷೇತ್ರದ ವ್ಯಾಪ್ತಿಯಲ್ಲಿ ಗದಗ ತಾಲ್ಲೂಕಿನ ಲಕ್ಕುಂಡಿ, ಹರ್ಲಾಪುರ, ತಿಮ್ಮೋಪುರ, ಪಾಪನಾಶಿ, ಪಾಪನಾಶಿ ತಾಂಡಾ ಹಾಗೂ ಸಂಭಾಪುರ ಗ್ರಾಮಗಳು ಒಳಪಟ್ಟಿವೆ. ಒಟ್ಟು 7,340 ಮತಗಳನ್ನು ಹೊಂದಿರುವ ಈ ಕ್ಷೇತ್ರಕ್ಕೆ  ಜುಲೈ 2 ರಂದು ಉಪಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ 2,501 ಮತಗಳು ಚಲಾವಣೆಯಾಗಿತ್ತು. 

ನಗರದ ಎಪಿಎಂಸಿಯಲ್ಲಿ ಬುಧವಾರ ನಡೆದ ಮತ ಎಣಿಕೆ ಕಾರ್ಯದಲ್ಲಿ  ಸಿದ್ಧಲಿಂಗೇಶಗೌಡ ಪಾಟೀಲ 1,702 ಮತಗಳು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಂಬರೀಶ್ ಕರೇಕಲ್ ಅವರು 477 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವೆಂಕಟೇಶ ಕುಲಕರ್ಣಿ 250 ಮತಗಳನ್ನು ಪಡೆದರು.

ಪಾಟೀಲ ಅವರು ವಿಜೇತರಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಮಾಜಿ ಶಾಸಕ ಡಿ. ಆರ್. ಪಾಟೀಲ, ಕೆಪಿಸಿಸಿ ಸದಸ್ಯ ವಾಸಣ್ಣ ಕುರಡಗಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತಪ್ಪ ಕಲಕೇರಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಉಮಚಗಿ, ಮಾಜಿ ಸದಸ್ಯ ಶಾಂತಯ್ಯ ಗಂಧದ, ಫಕ್ಕಿರಪ್ಪ ಹೆಬಸೂರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಚಪ್ಪ ಪೂಜಾರ, ಬಸವರಾಜ ಮೂಲಿಮನಿ, ಡಿ. ಎಚ್. ಮುಲ್ಲಾ,  ದಶರಥ ಗಾಣಿಗೇರ, ವಿದ್ಯಾದರ ದೊಡ್ಡಮನಿ, ಅಶೋಕ ಮಂದಾಲಿ, ಎಂ. ಎಂ. ಹುಬ್ಬಳ್ಳಿ, ಅಂದಾನೆಪ್ಪ ಕಣವಿ, ಮಂಜುನಾಥ ಮುಳಗುಂದ, ಮಂಜುನಾಥ ನೋಟಗಾರ, ಮಂಜುನಾಥ ಶೆಲವಡಿ ಅಭ್ಯರ್ಥಿಯನ್ನು ಅಭಿನಂದಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.