ADVERTISEMENT

ಲಕ್ಷ್ಮೇಶ್ವರ: ಎಲ್ಲೆಲ್ಲೂ ಶೇಂಗಾ ಒಕ್ಕಲು ಭರಾಟೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 6:41 IST
Last Updated 12 ಡಿಸೆಂಬರ್ 2013, 6:41 IST

ಲಕ್ಷ್ಮೇಶ್ವರ: ತಾಲ್ಲೂಕಿನಲ್ಲಿ ಎಲ್ಲಿ ನೋಡಿದರೂ ರೈತರು  ಶೇಂಗಾ ಬಣಿವೆಗಳನ್ನು ಬಿಚ್ಚಿ ಒಕ್ಕಲಿ ಮಾಡುವಲ್ಲಿ ನಿರತರಾಗಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ. ಶೇಂಗಾ ಈ ಭಾಗದ ಪ್ರಮುಖ ಎಣ್ಣೆಕಾಳು ಬೆಳೆ. ತಾಲ್ಲೂಕಿನ ಸಾವಿರಾರು ಹೆಕ್ಟೇರ್‌ನಲ್ಲಿ ಪ್ರತಿ ವರ್ಷ ರೈತರು ಮುಂಗಾರು ಹಾಗೂ ಹಿಂಗಾರು ಶೇಂಗಾ ಬೆಳೆಯುತ್ತಿದ್ದಾರೆ.

ಆದರೆ ಮುಂಗಾರು ಹಂಗಾ­ಮಿನಲ್ಲಿ ಬೆಳೆಯುವ ಕಂಠಿಶೇಂಗಾ ಒಕ್ಕಲಿ ಮಾಡುವುದಿಲ್ಲ. ಅದಕ್ಕೆ ಬದಲಾಗಿ ಬಳ್ಳಿಯನ್ನು ಕಿತ್ತು ಅದರಲ್ಲಿನ ಕಾಯಿ ಹರಿದು ಮಾರಾಟ ಮಾಡುತ್ತಾರೆ. ಆದರೆ ವಿಶೇಷವಾಗಿ ಮಸಾರಿ ಭೂಮಿ­­ಯಲ್ಲಿ ಚೆನ್ನಾಗಿ ಬೆಳೆಯುವ ಬಳ್ಳಿಶೇಂಗಾ ಮಾತ್ರ ಒಕ್ಕಲಿ ಮಾಡುತ್ತಾರೆ. ದೀಪಾವಳಿ ಅಥವಾ ಗೌರಿ ಹುಣ್ಣಿಮೆ ನಂತರ ಬಳ್ಳಿಶೇಂಗಾ­ವನ್ನು ಹರಗಿ ಹೊಲ ಅಥವಾ ಖಣದಲ್ಲಿ ಬಣಿವೆ ರೂಪದಲ್ಲಿ ಒಟ್ಟುತ್ತಾರೆ. ನಂತರ ಖಣ ತಯಾರಿಸಿ ಒಕ್ಕಲಿಗಾಗಿ ಬಣಿವೆ ಬಿಚ್ಚುತ್ತಾರೆ. ಈಗ ತಾಲ್ಲೂ­ಕಿನ ಎಲ್ಲ ಖಣಗಳಲ್ಲಿ ಶೇಂಗಾ ಒಕ್ಕಲಿ ಭರ್ಜರಿ­ಯಿಂದ ನಡೆದಿರುವುದನ್ನು ಕಾಣಬಹುದು. 

ಚೆನ್ನಾಗಿ ಬೆಳೆ ಬಂದರೆ ಎಕರೆಗೆ ಕನಿಷ್ಠ 4ರಿಂದ 5 ಕ್ವಿಂಟಲ್‌ ಶೇಂಗಾ ಬೆಳೆಯುತ್ತದೆ. ಆದರೆ ಈ ಬಾರಿ ಮಳೆ ಕೊರತೆಯಿಂದಾಗಿ ಇಳುವರಿಯಲ್ಲಿ ಭಾರೀ ಕುಸಿತವಾಗಿದ್ದು ಎಕರೆಗೆ ಕೇವಲ ಎರಡು ಕ್ವಿಂಟಲ್‌ ಮಾತ್ರ ಬೆಳೆದಿದೆ. ಹೀಗಾಗಿ ಶೇಂಗಾ ಬಿತ್ತನೆ ಮಾಡಿದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ‘ಈ ವರ್ಷಾ ಮಳಿ ಸರಿಯಾಗಿ ಆಗಿಲ್ರೀ. ಹಿಂಗಾಗಿ ಶೇಂಗಾ ಭಾಳ ಕಡಿಮಿ ಬೆಳದಾವು’ ಎಂದು ತಂಗೋಡ ಗ್ರಾಮದ ಯುವ ರೈತ ಡಿ.ಕೆ. ಹೊನ್ನಪ್ಪನವರ ಹಾಗೂ ಶಿಗ್ಲಿಯ ಪ್ರಗತಿಪರ ರೈತ ಕೇಶವ ಗುಲಗಂಜಿ ಹೇಳುತ್ತಾರೆ.

ತಾಲ್ಲೂಕಿನ ಸೂರಣಗಿ, ದೊಡ್ಡೂರು, ಬಾಳೇಹೊಸೂರು, ಶಿಗ್ಲಿ, ಲಕ್ಷ್ಮೇಶ್ವರ, ತಂಗೋಡ, ಕೊಕ್ಕರಗುಂದಿ, ಕೋಗನೂರು ಸೇರಿದಂತೆ ಮತ್ತಿತರ ಮಸಾರಿ ಭೂಮಿ ಬಳ್ಳಿ ಶೇಂಗಾ ಬೆಳೆ­ಯಲು ಬಹಳ ಸೂಕ್ತವಾಗಿವೆ. ಈ ಭೂಮಿ­ಯಲ್ಲಿ ಬೆಳೆದ ಶೇಂಗಾ ಬೀಜದಲ್ಲಿ ಎಣ್ಣೆ ಅಂಶ ಹೆಚ್ಚಾಗಿ­ರುತ್ತದೆ. 

‘ಮಸಾರಿ ಭೂಮ್ಯಾಗ ಬೆಳ್ದ ಶೇಂಗಾದಾಗ ಎಣ್ಣಿ ಅಂಶ ಭಾಳ ಇರತೈತಿ. ಹಿಂಗಾಗಿ ಇದಕ್ಕ ಛಲೋ ರೇಟ್‌ ಸಿಗತೈತಿ’ ಎಂದು ಶೇಂಗಾ ವ್ಯಾಪಾರ­ಸ್ಥರಾದ ಸಂಗಮೇಶ ಓದಾನವರ ಹಾಗೂ ಪ್ರಕಾಶ ಕಾಯಕದ ಹೇಳುತ್ತಾರೆ. ಸದ್ಯ ಶೇಂಗಾ 2500ರಿಂದ 3500 ರೂಪಾಯಿಗೆ ಮಾರಾಟ ಆಗುತ್ತಿದೆ. ಈ ಬೆಲೆಯಲ್ಲಿ ಮಾರಾಟ ಮಾಡಿದರೆ ರೈತರಿಗೆ ನಷ್ಟ ಉಂಟಾಗುತ್ತದೆ.

ಕಾರಣ ಸರ್ಕಾರ ಶೇಂಗಾ ಬೆಳೆದ ರೈತರ ಹಿತ ಕಾಪಾಡಲು ಮುಂದೆ ಬರಬೇಕಾಗಿದೆ. ಈಗಾಗಲೇ ಶೇಂಗಾಕ್ಕೆ 3800 ರೂಪಾಯಿ ಬೆಂಬಲ ಬೆಲೆ ಘೋಷಣೆ ಆಗಿದೆ ಎಂದು ಹೇಳ­ಲಾಗುತ್ತಿದೆ. ಆದರೆ ಬೆಂಬಲ ಬೆಲೆ ನಿಗದಿ­ಪಡಿಸಿ­ರುವುದು ಎಲ್ಲ ರೈತರಿಗೆ ತಿಳಿದಿಲ್ಲ. ಹೀಗಾಗಿ ಅವರು ಕಡಿಮೆ ದರಕ್ಕೆ ಶೇಂಗಾ ಮಾರಾಟ ಮಾಡು­ತ್ತಿದ್ದಾರೆ. ಕಾರಣ ಜಿಲ್ಲಾಡಳಿತ ಈ ಕುರಿತು ರೈತರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಾದ ಅಗತ್ಯ ಇದೆ.
–ನಾಗರಾಜ ಹಣಗಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.