ADVERTISEMENT

ವಾಜಪೇಯಿ ಆರೋಗ್ಯ ಶ್ರೀಯಿಂದ ಮರುಜನ್ಮ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 9:40 IST
Last Updated 4 ಫೆಬ್ರುವರಿ 2011, 9:40 IST

ಗದಗ: ಅಲ್ಲಿ ನೆರೆದಿದ್ದವರಿಗೆ ಸಾವನ್ನೇ ಗೆದ್ದ ಸಂಭ್ರಮ. ಕೆಲವರು ಸಾವಿನ ಮನೆಯ ಬಾಗಿಲ ತನಕ ಹೋಗಿ ವಾಪಸ್ ಬಂದ ಘಟನೆಯನ್ನು ಬಿಚ್ಚು ಮನಸ್ಸಿನಿಂದ ವಿವರಿಸಿದರೆ, ಹಾಲುಗಲ್ಲದ ಮಕ್ಕಳು ಹಾಗೂ ಹಸುಗೂಸಿನ ತಾಯಂದಿರ ಬಾಯಿಂದ ಮಾತು ಹೊರಡದೇ, ತಮ್ಮ ಮಕ್ಕಳು ಬದುಕಿ ಉಳಿಯಲು ಸಹಾಯ ಮಾಡಿದ ವಾಜಪೇಯಿ ಆರೋಗ್ಯ ಶ್ರೀ ಯೋಜನೆಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.

ಇದು ಗದುಗಿನ ಕೆ.ಎಚ್.ಪಾಟೀಲ ಸಭಾ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಾಜಪೇಯಿ ಆರೋಗ್ಯ ಶ್ರೀ ಫಲಾನುಭವಿಗಳ ಸ್ಪಂದನ ಕಾರ್ಯಕ್ರಮದಲ್ಲಿ ಕಂಡು ಬಂದ ಮನಕರಗಿಸುವ ದೃಶ್ಯಗಳು.

ಹೃದಯಬೇನೆಯಿಂದ ನರಳುತ್ತಿದ್ದ ಮನೀಶ್ ಎಂಬ ಬಾಲಕ, ನರರೋಗದಿಂದ ಬಳಲುತ್ತಿದ್ದ ತಾಜುದ್ದೀನ್, ಅಶೋಕ ಶೆಟ್ಟರ, ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೇಣುಕ, ಕಮಲಮ್ಮ,ಮಾಧವ ಜೋಷಿ ಸೇರಿದಂತೆ ಇನ್ನೂ ಅನೇಕ ಮಂದಿ ತಮಗಿದ್ದ ಕಾಯಿಲೆ ಬಗ್ಗೆ ತಿಳಿಸಿದರು. ತಮ್ಮ ಮನೆಯಲ್ಲಿ ಒಂದು ಹೊತ್ತಿನ ಕೂಳಿಗೂ ಗತಿ ಇಲ್ಲದೆ ಇರುವಾಗ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಮಗಿರುವ ಕಾಯಿಲೆಯನ್ನು ಗುಣಪಡಿಸಿಕೊಳ್ಳುವುದು ದೂರದ ಮಾತು. ಇಂತಹ ಕಷ್ಟದ ಕಾಲದಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ನಮ್ಮ ಕೈ ಹಿಡಿಯಿತು. ನಯಾಪೈಸೆ ಖರ್ಚು ಇಲ್ಲದೆ ಬೆಂಗಳೂರು-ಮೈಸೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಯಶಸ್ಸಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದೇವೆ ಎಂದು ಹೇಳಿ ಕ್ಷಣಕಾಲ ಖುಷಿ ಪಟ್ಟರು, ಆನಂದಭಾಷ್ಪ ಸುರಿಸಿದರು. ಇಡೀ ಸಭಾಂಗಣ ಇವರೆಲ್ಲರ ಮಾತನ್ನು ಮೌನವಾಗಿ ಆಲಿಸಿತು. ಅವರ ಭಾವನೆಗಳ ಜೊತೆ ತಮ್ಮ ಮಾತುಗಳನ್ನು ಸೇರಿಸಿ ಕಷ್ಟದ ನುಡಿಯಲ್ಲಿ ಒಂದಾದರು, ಅಲ್ಲಿ ನೆರೆದಿದ್ದ ಸಹಸ್ರಾರು ಜನರು.

ಆರೋಗ್ಯ ಸಚಿವ ಬಿ.ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಶಾಸಕರಾದ ಶ್ರೀಶೈಲಪ್ಪ ಬಿದರೂರ, ರಾಮಣ್ಣ ಲಮಾಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚಂಬವ್ವ ಪಾಟೀಲ, ಉಪಾಧ್ಯಕ್ಷ ಬೀರಪ್ಪ ಬಂಡಿ, ಜಿಲ್ಲಾಧಿಕಾರಿ ಎಸ್.ಶಂಕರನಾರಾಯಣ, ಎಸ್‌ಪಿ ರವಿಕುಮಾರ ನಾಯಕ, ಜಿಲ್ಲಾ ಪಂಚಾಯಿತಿ ಸಿಇಓ ವೀರಣ್ಣ ಜಿ.ತುರಮರಿ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.