ADVERTISEMENT

ವ್ಯಸನಮುಕ್ತ ಬದುಕು ನಡೆಸಿ ತೋಂಟದ ಶ್ರೀ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 5:53 IST
Last Updated 1 ಮಾರ್ಚ್ 2014, 5:53 IST

ಗದಗ: ಶರಣ ತತ್ವದಲ್ಲಿ ಆದರ್ಶ ದಾಂಪತ್ಯ ಜೀವನಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ ಎಂದು ತೋಂಟದಾರ್ಯ ಮಠದ  ಪೀಠಾಧಿಪತಿ ಡಾ.ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವದಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮದಲ್ಲಿ ಪತಿ-ಸತಿಗೆ ಸಮನಾದ ಗೌರವವಿದೆ. ಸ್ವತಃ ಇಷ್ಟಲಿಂಗವನ್ನು ಪತಿಯೆಂದು ಶರಣನು ಸತಿಯೆಂದು ಭಾವಿಸಿ ಪೂಜಿಸಬೇಕು. ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ದರಾಮ, ಚನ್ನಬಸವಣ್ಣ ಮುಂತಾದವರು ಸಂಸಾರಿಗಳಾಗಿರಲಿಲ್ಲ. ಶರಣ ಕುಲಕ್ಕೆ ನಾಯಕನಾದ ಬಸವಣ್ಣ ಹಾಗೂ ಹೆಚ್ಚಿನ ಸಂಖ್ಯೆಯ ಶರಣರು ಆದರ್ಶ ಗೃಹಸ್ಥನಾಗಿದ್ದರು. ಬಂಗಾರ, ಕಾರು, ಬಂಗ್ಲೆಗಳಿಗಿಂತ ಸನ್ನಡತೆ, ವ್ಯಸನ ಮುಕ್ತ ಬದುಕು, ಪರಸ್ಪರ ನಂಬಿಕೆ, ಕಾಯಕ ನಿಷ್ಟೆ, ಸಂಸ್ಕಾರಗಳು ಸತಿ–ಪತಿಗಳ ಬದುಕಿಗೆ ಬಹುವಿಧವಾದ ನೆಮ್ಮದಿ ನೀಡಬಲ್ಲವು ಎಂಬುದನ್ನು ವಿವರಿಸಿದರು.

ತಮ್ಮ ಪುತ್ರಿಯ  ಕಲ್ಯಾಣ ಮಹೋತ್ಸವ ಸವಿನೆನಪಲ್ಲಿ ಶಿವಾನುಭವ ಭಕ್ತಿ ಸೇವೆ ವಹಿಸಿ ಶರಣ ತತ್ವ ಸಮ್ಮತ ದಾಂಪತ್ಯ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುವ ಮೂಲಕ ಜಿಲ್ಲಾ ಚೇಂಬರ್ ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಹೊಸ ಮೇಲ್ಪಂಕ್ತಿ ಹಾಕಿದಂತಾಗಿದೆ ಎಂದು ಅಭಿನಂದಿಸಿದರು.

ನೂತನ ದಂಪತಿ ಭಾಗ್ಯಶ್ರೀ-ಸಂತೋಷ  ಅವರನ್ನು ಸ್ವಾಮೀಜಿ ಆಶಿರ್ವದಿಸಿದರು.ಅಣ್ಣಿಗೇರಿಯ ನಿಂಗಮ್ಮ ಹುಗಾರ, ಪ್ರಾಚಾರ್ಯ ಎಸ್.ಎಸ್.ಹರ್ಲಾಪೂರ ಅವರು ಶರಣ ಸಮ್ಮತ ದಾಂಪತ್ಯ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಚೇಂಬರ್ ಅಧ್ಯಕ್ಷರಾದ ಎಲ್.ಸಿ.ಲಿಂಬಯ್ಯಸ್ವಾಮಿ ಮಠ ಪಾಲ್ಗೊಂಡಿದ್ದರು. 

ರಾಜೇಶ್ವರಿ ಕಲಾಕುಟೀರದ ವಿದ್ಯಾರ್ಥಿಗಳಿಂದ ದಾಂಪತ್ಯ ಗೀತೆ ನೃತ್ಯ ರೂಪಕ ನಡೆದವು. ಸ್ಮಿತಾ ಕೋಡಳ್ಳಿ ಹಿರೇಮಠ ಅವರಿಂದ ದಾಂಪತ್ಯ ಗೀತೆಗಳ ಹಾಡುಗಾರಿಕೆ ನಡೆಯಿತು.

ಮುಂಡರಗಿಯ  ವೀರೇಶ್ ಈಶಣ್ಣ ಬೆಟಗೇರಿ ಧರ್ಮಗ್ರಂಥ ಪಠಣ, ಭಾಗ್ಯಶ್ರೀ ಸಂತೋಷ ಜೇಡಿ ಧರ್ಮಚಿಂತನ ನಡೆಸಿದರು.ಶಿವಾನುಭವ ಸಮಿತಿ ಅಧ್ಯಕ್ಷ ಪ್ರೊ.ಎಸ್.ಎನ್.ಆದಿ ಸ್ವಾಗತಿಸಿದರು. ಎಂ..ಎ.ಹಂಚನಾಳ  ನಿರೂಪಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ  ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ  ಮೃತ್ಯುಂಜಯ ಸಂಕೇಶ್ವರ,  ಶಿವಲೀಲಾ ಕೆ.ಕುರಡಗಿ, ಕಾರ್ಯದರ್ಶಿ ವೀರಣ್ಣ ಹೊನಗಣ್ಣವರ, ಸಹ ಕಾರ್ಯದರ್ಶಿ ಗುರುಬಸವಲಿಂಗ ತಡಸದ, ಖಜಾಂಚಿ ಪ್ರಭಯ್ಯ ಎಸ್.ಹಿರೇಮಠ ಹಾಜರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.