ADVERTISEMENT

ಶಾಂತಿ ಕಾಪಾಡಲು ಕಾನೂನು ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 6:40 IST
Last Updated 26 ಸೆಪ್ಟೆಂಬರ್ 2011, 6:40 IST

ಗದಗ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕಾನೂನಿನ ಅವಶ್ಯಕತೆ ಇದೆ ಎಂದು ನ್ಯಾಯಾಧೀಶ ಎಂ.ಎಸ್.ಪಾಟೀಲ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಬಳಗಾನೂರಿನ ಚನ್ನವೀರ ಶರಣರ ಮಠದ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಹಾಗೂ ಜನತಾ ನ್ಯಾಯಾಲಯ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ನಮಗೆ ಏಕೆ ಬೇಕು ಎನ್ನುವ ಅರಿವು ಮೊದಲು ಉಂಟಾಗಬೇಕು. ಅದಕ್ಕಾಗಿ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಾಮಾನ್ಯ ಜನರಿಗೂ ಕಾನೂನಿನ ತಿಳಿವಳಿಕೆ ಮೂಡಿಸಲಾಗುತ್ತಿದೆ. ಸಮಾಜದಲ್ಲಿ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಲು ಕಾನೂನಿನ ಅವಶ್ಯಕತೆ ಇದೆ ಎಂದರು.

ನೂರು ರೂಪಾಯಿಗಿಂತ ಹೆಚ್ಚಿನ ಮೊತ್ತದ ಖರೀದಿ ವ್ಯವಹಾರವನ್ನು ಊರಿನ ಪಂಚಾಯ್ತಿದಾರರ ಸಮ್ಮುಖದಲ್ಲಿ ಮಾಡಿಕೊಂಡರೆ ಅದು ಉರ್ಜಿತವಾಗುವುದಿಲ್ಲ. ಆದ್ದರಿಂದ ಗ್ರಾಮಸ್ಥರು ಇಂತಹ ವ್ಯವಹಾರಗಳನ್ನು ನೋಂದಣಿ ಕಚೇರಿಗಳಲ್ಲಿ ಕಾನೂನಬದ್ಧವಾಗಿ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ನ್ಯಾಯಾಧೀಶ ಉಮೇಶ ಮೂಲಿಮನಿ ಮಾತನಾಡಿ, ಗ್ರಾಮೀಣ ಜನರು ಕಾನೂನು ಸಾಕ್ಷರತೆ ಅರಿತುಕೊಂಡರೆ ವ್ಯಾಜ್ಯಗಳು ಕಡಿಮೆಯಾಗುತ್ತವೆ ಎಂದರು.

ವಕೀಲರ ಸಂಘದ ಅಧ್ಯಕ್ಷ ವೈ.ಆರ್.ಗುಡೂರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಾನೂನು ಸಾಕ್ಷರತೆ ಮೂಡಿಸುವ ಅವಶ್ಯಕತೆ ಬಹಳ ಮುಖ್ಯವಾಗಿದೆ. ಮಕ್ಕಳು ಚಿಕ್ಕಂದಿನಿಂದಲೇ ಕಾನೂನು ಮಾಹಿತಿ ಪುಸ್ತಕವನ್ನು ಓದಿ ಕಾನೂನಿನ ಅರಿವನ್ನು ಹೊಂದಬೇಕು ಎಂದರು.

ವಕೀಲ ಬಿ.ಎ.ಗೂಳರಡ್ಡಿ `ಮಧ್ಯಸ್ಥಿಕೆ ಮತ್ತು ಎಡಿಆರ್ ಪದ್ಧತಿ~ ಕುರಿತು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಫ್. ತಹಶೀಲ್ದಾರ `ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ~ ಕುರಿತು ಉಪನ್ಯಾಸ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎಸ್.ವಾಲಿ ಅಧ್ಯಕ್ಷತೆ ವಹಿಸಿದ್ದರು.
 
ನ್ಯಾಯಾಧೀಶ ಎಲ್.ಆರ್.ಕುರಣೆ, ತಾಲ್ಲೂಕು ಪಂಚಾಯಿತಿ ಸದಸ್ಯ ಎ.ಎಸ್.ಅಗಸಿಮನಿ, ವಕೀಲ ಸಂಘದ ಕಾರ್ಯದರ್ಶಿ ಎಂ.ಎಸ್. ರಾಮೇನಹಳ್ಳಿ, ಸಿ.ಆರ್.ಚಳ್ಳಮರದ, ಎಸ್.ಆರ್.ಗೊಂಡಬಾಳ. ಎಸ್.ವಿ.ಕಬಾಡಿ ಹಾಜರಿದ್ದರು. ಬಿ.ವಿ.ನೀಲರೂಟಿ ಸ್ವಾಗತಿಸಿದರು. ಎ.ಎಸ್.ಮಕಾನದಾದ ವಂದಿಸಿದರು. ಬಿ.ಎಂ.ಕುಕನೂರ ನಿರೂಪಿಸಿದರು. ವೀರಣ್ಣ ಚನ್ನಪ್ಪ ಅಂಗಡಿ ಗೀಗಿ ಪದ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.