ADVERTISEMENT

ಶಾಲಾ ಆವರಣ; ಬಹಿರ್ದೆಸೆಯ ತಾಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 7:45 IST
Last Updated 20 ಸೆಪ್ಟೆಂಬರ್ 2011, 7:45 IST

ನರಗುಂದ: ಪಟ್ಟಣದ ಪ್ರಮುಖ ಸ್ಥಳವಾದ ಪುರಸಭೆ ಕೆಳಭಾಗದಲ್ಲಿರುವ ಸರಕಾರಿ ಹೆಣ್ಣುಮಕ್ಕಳ ಶಾಲೆ ಆವರಣ ಬಹಿರ್ದೆಸೆಯ ತಾಣವಾಗಿದ್ದು, ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರೋಸಿಹೋಗಿದ್ದಾರೆ.

  ಜೊತೆಗೆ  ಶಾಲಾ ಆವರಣದಲ್ಲಿ ಕಿಡಿಗೇಡಿಗಳ ಕಾಟವೂ ಜಾಸ್ತಿಯಾಗಿದೆ. ಯಾರೂ ಇಲ್ಲದ ಸಮಯ ನೋಡಿ ಕೆಲವು ಕಿಡಿಗೇಡಿಗಳು ಭಾನುವಾರ ರಾತ್ರಿ ಹೆಣ್ಣುಮಕ್ಕಳ ಸರ್ಕಾರಿ  ಶಾಲಾ ಆವರಣದಲ್ಲಿರುವ ನೀರಿನ ನಲ್ಲಿಯನ್ನೇ ಒಡೆದು ಹಾಕಿದ್ದಾರೆ.  ರಕ್ಷಣಾ ಗೋಡೆ ಕಾಮಗಾರಿ ಆರಂಭವಾಗಿದ್ದು, ಜೊತೆಗೆ ಕಂಪೌಂಡ್  ದುರಸ್ತಿಯಲ್ಲಿರುವುದರಿಂದ ರಕ್ಷಣೆಗೆ ತಗಡುಗಳನ್ನು ನಿಲ್ಲಿಸಲಾಗಿತ್ತು.  ಅವುಗಳನ್ನು ಚೆಲ್ಲಾಪಿಲ್ಲಿ ಮಾಡಿದ ಕಿಡಿಗೇಡಿಗಳು ಶಾಲೆಯ ಮುಂಭಾಗದಲ್ಲಿಯೇ ಬಹಿರ್ದೆಸೆಗೆ ಬರುತ್ತಿದ್ದಾರೆ.
 
ವಿದ್ಯಾರ್ಥಿಗಳು ಶಾಲೆಗೆ  ಆಗಮಿಸದಂತಹ ದುಃಸ್ಥಿತಿ ನಿರ್ಮಾಣವಾಗಿದೆ.  ಇದೇ ಆವರಣದಲ್ಲಿ  ನಂ 2 ಸರ್ಕಾರಿ ಪ್ರಾಥಮಿಕ ಶಾಲೆ, ಸರ್ಕಾರಿ  ಉರ್ದು ಪ್ರಾಥಮಿಕ ಶಾಲೆಗಳಿವೆ.   ಆದರೆ ಇಲ್ಲಿಯ ದೃಶ್ಯ ನೋಡಿದರೆ  ಯಾರಿಗಾದರೂ ಅಯ್ಯೋ  ಎನಿಸುವುದರ ಜೊತೆಗೆ ಸಿಟ್ಟೂ ಬರುತ್ತದೆ. ಇಂತಹುದರಲ್ಲಿ ವಿದ್ಯಾರ್ಥಿಗಳು ಪಾಠ ಪ್ರವಚನ ಕೇಳಬೇಕೇ ಎನ್ನುವಂತಹ ಪರಿಸ್ಥಿತಿ ಇದೆ. 

 ಇದರ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಸಂಬಂಧಿಸಿದವರಿಗೆ, ಪುರಸಭೆಗೆ ಹಲವಾರು ಸಲ ಮನವಿ ಮಾಡಿದ್ದರೂ ಇದಕ್ಕೆ ಕೊನೆ ಇಲ್ಲದಂತಾಗಿದೆ.

ಈಗಲಾದರೂ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಶಾಲಾ ಆವರಣವನ್ನು ಬಹಿರ್ದೆಸೆ ಮುಕ್ತ ಮಾಡಿ ಕಿಡಿಗೇಡಿಗಳ ಕಾಟದಿಂದ ತಪ್ಪಿಸಿ ಶಾಲೆ ರಕ್ಷಣೆ ಮಾಡುವಂತೆ  ವಿದ್ಯಾರ್ಥಿಗಳು, ಪಾಲಕರು  ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.