ADVERTISEMENT

ಶಾಲಾ ವ್ಯವಸ್ಥೆ ರಾಜಕೀಯ ರಹಿತವಾಗಿರಲಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 8:25 IST
Last Updated 12 ಫೆಬ್ರುವರಿ 2011, 8:25 IST

ಪಂಡಿತ ಭೀಮಸೇನ ಜೋಶಿ ಮಹಾಮಂಟಪ (ಗಜೇಂದ್ರಗಡ): ‘ಶಾಲೆಯಲ್ಲಿ ರಾಜಕೀಯ ರಹಿತ ಆಡಳಿತಾತ್ಮಕ ವ್ಯವಸ್ಥೆ ಜಾರಿಗೆ ಬರಬೇಕು. ಇಲ್ಲದಿದ್ದರೇ ರಾಜಕೀಯದ ಯಜ್ಞಕುಂಡದಲ್ಲಿ ಮಕ್ಕಳು ಮೂಕ ಬಲಿಯಾಗಬೇಕಾಗುತ್ತದೆ’ ಎಂದು ಗದಗ ಜಿಲ್ಲಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಜ್ಞಾನದೇವ ದೊಡ್ಡಮೇಟಿ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಯವರ ಭವ್ಯ ವೇದಿಕೆಯಲ್ಲಿ ಶುಕ್ರವಾರ ಪ್ರಾರಂಭಗೊಂಡ ಜಿಲ್ಲಾ ಸಾಹಿತ್ಯ ಸಮ್ಮೇಳದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ 78ರ ಪ್ರಾಯದ ಸಾಹಿತಿ, ಮಾಜಿ ಶಾಸಕ ದೊಡ್ಡಮೇಟಿ ಅವರು ತಮ್ಮ ವಿಚಾರ ಸರಣಿಯನ್ನು ಅಲೆ-ಅಲೆಯಾಗಿ ಹರಿಬಿಟ್ಟರು.

‘ಶಿಕ್ಷಕರನ್ನು ಮಕ್ಕಳ ಜೊತೆಗೆ ಬಿಟ್ಟು ಬಿಡಬೇಕು. ಶಿಕ್ಷಕರಿಗೆ ಬಿಸಿಯೂಟದ ವ್ಯವಸ್ಥೆ ವಹಿಸಿರುವುದು ಬಿಸಿತುಪ್ಪವಾಗಿ ಪರಿಣಮಿಸಿದೆ. ಇದು ಶಿಕ್ಷಕರಿಗೆ ನುಂಗಲು ಆಗದು ಉಗಳಲು ಬಾರದು ಎನ್ನುವಂತಾಗಿದೆ. ರಾಜಕೀಯ ನಡೆಯನ್ನು ಅರಿತಿರುವ ಶಿಕ್ಷಕರು ಬಿಸಿತುಪ್ಪವನ್ನು ತಣ್ಣಗೆ ಮಾಡಿ ನುಂಗುವುದು ಕರಗತ ಮಾಡಿಕೊಂಡಿದ್ದಾರೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಇದೆಲ್ಲ ಏಕೆ’ ಎಂದು ಕಟುವಾಗಿ ಪ್ರಶ್ನಿಸಿದ ದೊಡ್ಡಮೇಟಿ, ಶಿಕ್ಷಕರನ್ನು ಹಣಕಾಸಿನ ವ್ಯವಹಾರದಿಂದ ದೂರವಿಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

‘ಕನ್ನಡ ಬೆಳವಣಿಗೆಗೆ ಅಡಿಗಲ್ಲೇ ಪ್ರಾಥಮಿಕ ಶಾಲೆಗಳು. ಆದರೆ, ಮಕ್ಕಳ ಪಾಲಕರು ಮತ್ತು ಶಿಕ್ಷಕರ ಸಮನ್ವಯದ ಅಭಾವದಿಂದ ಉದ್ದೇಶಿತ ಆಶಯ ಈಡೇರುತ್ತಿಲ್ಲ. ಹಿಂದೆಲ್ಲ ಮಗುವಿನ ಅಕ್ಷರ ಪ್ರಾರಂಭಕ್ಕೆ ಬಿನ್ನೆತ್ತ, ದೊಡ್ಡ ಬಿನ್ನೆತ್ತ ಶ್ರೀಕಾರ ಹಾಕಿ ಶಿಕ್ಷಣದ ನೆಲೆಗಟ್ಟಿಗೆ ಭದ್ರಬುನಾದಿ ಹಾಕಲಾಗುತ್ತಿತ್ತು. ಈಗ ಆ ಕೆಲಸವನ್ನು ವಹಿಸಿಕೊಂಡಿರುವ ಅಂಗನವಾಡಿ ಕೇಂದ್ರಗಳು ಎಷ್ಟರ ಮಟ್ಟಿಗೆ ಕಾರ್ಯಪ್ರವೃತ್ತವಾಗಿವೆ ಎಂದು ಯೋಚಿಸಬೇಕಾಗಿದೆ. ಅಂಗನವಾಡಿ ಕೇಂದ್ರಗಳು ಮಕ್ಕಳನ್ನು ದೈಹಿಕವಾಗಿ ಬೆಳೆಸುವುದರ ಜೊತೆಗೆ ಬುದ್ಧಿಯ ವಿಕಾಸಕ್ಕೆ ಪೂರಕವಾಗಬಲ್ಲ ವಾತಾವರಣವನ್ನು ತಂದುಕೊಡಬೇಕೇ ವಿನಹ ದೊಡ್ಡಿಗಳಾಗಬಾರದು’ ಎಂದು ಅಭಿಪ್ರಾಯಪಟ್ಟರು.

ಮಕ್ಕಳ ಮಾನಸಿಕ ಮತ್ತು ದೃಢತೆಯನ್ನು ಹೆಚ್ಚಲು ಸಂಗೀತ ಮತ್ತು ಚಿತ್ರಕಲೆ ಅವಶ್ಯವಾಗಿದೆ. ಹೀಗಾಗಿ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಮತ್ತು ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕೆಂದು ಅವರು ಸರ್ಕಾರಕ್ಕೆ ಒತ್ತಾಯ ಮಾಡಿದರು.ಕನ್ನಡ ಭಾಷೆಯ ಬೆಳೆವಣಿಯತ್ತ ತಮ್ಮ ನೋಟ ಬೀರಿದ ಜ್ಞಾನದೇವ ಅವರು, ಕನ್ನಡವನ್ನು ಜನಮನದಲ್ಲಿ ಬಿತ್ತಿದ ಅನೇಕ ಜನರು ಇಂದು ನಮ್ಮೊಂದಿಗೆ ಇಲ್ಲ. ಅವರು ಹಚ್ಚಿದ ಕನ್ನಡದ ಬೆಳೆ ಹುಲುಸಾಗಿ ಬೆಳೆಯಲು ಅನುಕೂಲಕರ ವಾತಾವರಣ ನಿರ್ಮಿಸಬೇಕಿದೆ ಎಂದರು.

ಕನ್ನಡ ಏಕೀಕರಣಕ್ಕಾಗಿ ದುಡಿದ ಸರ್ ಸಿದ್ಧಪ್ಪ ಕಂಬಳಿ ಅವರಿಗಾಗಿ ಸರ್ಕಾರ ಏನನ್ನು ಮಾಡಿಲ್ಲ. ಅದೇ ರೀತಿ ಬ್ರಿಟಿಷ್ ಆಡಳಿತದಲ್ಲಿ ಮುಂಬೈ ವಿಧಾನಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಅಂದಾನಪ್ಪ ದೊಡ್ಡಮೇಟಿ ಅವರು ಮಾಡಿದ ಭಾಷಣಗಳ ನಡಾವಳಿಯನ್ನು ತರಸಿ ಅದಕ್ಕೊಂದು ಗ್ರಂಥ ರೂಪ ಕೊಡಲು ಈಗಿನ ಸರ್ಕಾರಗಳ ಕೈಯಲ್ಲಿ ಆಗಿಲ್ಲ ರಾಜಕಾರಣಿಗಳ ನಿರ್ಲಕ್ಷ್ಯವನ್ನು ತಮ್ಮ ಭಾಷಣದ ಮೊನೆಯಿಂದ ಕುಟುಕಿದರು.
‘ಮಹಾದಾಯಿ ಯೋಜನೆ ವಿಚಾರದಲ್ಲಿ ಕರ್ನಾಟಕ ಮತ್ತು ಗೋವಾ ಸರ್ಕಾರಗಳು ಬರೀ ಹಗ್ಗ ಜಗ್ಗಾಟದಲ್ಲಿ ತೊಡಗಿವೆ. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ಹೇಳುತ್ತಲೇ ಜನರಿಗೆ ಕೇವಲ ಮಧುಚಂದ್ರದ ಮಾತುಕತೆಯನ್ನು ಕೇಳಿಸುತ್ತಿವೆ’ ಎಂದು ಕಿಡಿಕಾರಿದ ಅವರು, ಈ ಯೋಜನೆಯಿಂದ  ನರಗುಂದ ಮತ್ತು ರೋಣ ತಾಲ್ಲೂಕಿಗೆ ನೀರನ ಬರವೇ ತಪ್ಪುತ್ತದೆ ಎಂದರು.
‘ನೆರೆಹಾವಳಿಯ ಸಂತ್ರಸ್ತರ ಗೋಳು ಹೇಳತೀರದಾಗಿದೆ. ಅವರು ಇನ್ನೆಷ್ಟು ದಿನ ಶೆಡ್ಡುಗಳಲ್ಲಿ ವಾಸಿಸಬೇಕು. ಅವರಿಗೆ ಆಸರೆ ಸಿಗುವುದು ಎಂದು? ಆ ಜನರ ಕಣ್ಣೀರು ನಿಲ್ಲುವಂತೆ ಮಾಡಿರಿ’ ಎಂದು ತುಂಬಿ ಬಂದ ಕಂಠದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.