ADVERTISEMENT

ಶುದ್ಧ ನೀರಿನ ಘಟಕಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 5:30 IST
Last Updated 21 ಫೆಬ್ರುವರಿ 2012, 5:30 IST

ಗದಗ: ಕೆ.ಎಚ್.ಪಾಟೀಲ ಪ್ರತಿಷ್ಠಾನವು ಗದಗ ತಾಲೂಕಿನ ಎಲ್ಲ ಜನರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕೆಂಬ ಉದ್ದೇಶ ಹೊಂದಿದ್ದು, ಕೆ.ಎಚ್.ಪಾಟೀಲರ ಹುಟ್ಟು ಹಬ್ಬದ ದಿನವಾದ ಮರ್ಚ್ 16ರ ಒಳಗೆ ಅವಳಿ ನಗರದಲ್ಲಿ ಇನ್ನೂ  3 ರಿಂದ 4 ಘಟಕಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.  

ಕೆ.ಎಚ್.ಪಾಟೀಲ ಪ್ರತಿಷ್ಠಾನ ಹಾಗೂ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ಆಶ್ರಯದಲ್ಲಿ ನಗರದ ಖಾನತೋಟದಲ್ಲಿ 16ನೇ ಶುದ್ಧ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ಆರಂಭಗೊಂಡ ಘಟಕ 16ನೇ ಶುದ್ಧ ನೀರಿನ ಘಟಕವಾಗಿದೆ. ತಾಲ್ಲೂಕಿನಲ್ಲಿ ಇನ್ನು 12 ಘಟಕಗಳನ್ನು ಆರಂಭಿಸುವ ಉದ್ದೇಶ ಹೊಂದಿದ್ದು, ಬೇಸಿಗೆ ಆರಂಭದ ಈ ಹಂತದಲ್ಲಿ ಬಡ ಜನರಿಗೆ ತಮ್ಮ ಆರೋಗ್ಯ ರಕ್ಷಣೆಗೆ ಶುದ್ಧ ನೀರು ಉಪಯೋಗವಾಗಲಿದೆ ಎಂದು ಹೇಳಿದರು.

ಉದ್ದೇಶಿತ ಎಲ್ಲ ಘಟಕಗಳು ಆರಂಭಗೊಂಡ ನಂತರದಲ್ಲಿ ಗದಗ ಬೆಟಗೇರಿ ಅವಳಿ ನಗರದ ಇಷ್ಟೊಂದು ದೊಡ್ಡ ಸಂಖ್ಯೆಯ ಜನರಿಗೆ ಶುದ್ಧ ನೀರು ಒದಗಿಸಿದ ಹೆಗ್ಗಳಿಕೆಗೆ ಅವಳಿ ನಗರ ಪಾತ್ರವಾಗಲಿದೆ. ಅಲ್ಲದೇ ಶುದ್ಧ ನೀರು ಸೇವಿಸುವುದರಿಂದ ಬಡ ಜನರು ಅನಾರೋಗ್ಯದ ಕಾರಣದಿಂದ ಕಳೆದುಕೊಳ್ಳುತ್ತಿದ್ದ ಕೆಲಸದ ದಿನಗಳು ಕಡಿತವಾಗುತ್ತವೆ. ಇದು ಅವರ ವ್ಯವಸ್ಥಿತ ಬದುಕಿಗೆ ಅನುಕೂಲವಾಗಲಿದೆ ಎಂದರು.

ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ, ಅವಳಿ ನಗರದ ಬಿಪಿಎಲ್ ಕಾರ್ಡ ಇರುವ ಕುಟುಂಬಗಳಿಗೆ ಶುದ್ಧ ನೀರು ಸಂಗ್ರಹಿಸಲು ನಗರಸಬೆ ವತಿಯಿಂದ ಎರಡು ಕ್ಯಾನ್‌ಗಳನ್ನು ಉಚಿತವಾಗಿ ಕೊಡಲಾಗು ವುದು ಎಂದು ಭರವಸೆ ನೀಡಿದರು.

ಹೊಸಳ್ಳಿಯ ಬೂದೀಶ್ವರ ಸ್ವಾಮೀಜಿ ಅವರು ಹೊಸ ನೀರಿನ ಘಟಕಕ್ಕೆ ಚಾಲನೆ ನೀಡಿದರು. ಜಾನಪದ ವಿದ್ವಾಂಸ ಗೋ.ರು. ಚನ್ನಬಸಪ್ಪ ಅವರು ಜನರಿಗೆ ಶುದ್ಧ ನೀರಿನ ಕ್ಯಾನ್ ವಿತರಿಸಿದರು. ಮಾಜಿ ಶಾಸಕ ಡಿ.ಆರ್.ಪಾಟೀಲ, ನಗರಸಭೆ ಉಪಾಧ್ಯಕ್ಷೆ ಖಮರಸುಲ್ತಾನ ನಮಾಜಿ, ಸದಸ್ಯೆ ಪದ್ಮಾ ಯಗುಪಲ್ಲಿ, ಕಮಲಾಕ್ಷಿ ಗೊಂದಿ, ಬಿ.ಬಿ.ಅಸೂಟಿ, ದಾವಲಸಾಬ, ಅಬ್ದುಲ್‌ರಹಮಾನ ಹುಯಿಲಗೋಳ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.