ADVERTISEMENT

ಸಚಿವ ಪಾಟೀಲರಿಗೆ ಯಾವಗಲ್ ಒತ್ತಾಯ...

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 5:30 IST
Last Updated 14 ಅಕ್ಟೋಬರ್ 2011, 5:30 IST

ನರಗುಂದ: ವಿಳಂಬವಾದರೂ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು ಶ್ಲಾಘನಾರ್ಹ. ಆದರೆ ಆ ಕಾಮಗಾರಿಗಳು ಯಾವುವು, ಎಷ್ಟು ಹಣ ವ್ಯಯಿಸಲಾಗುತ್ತಿದೆ. ಅದನ್ನು ಯಾರು ಕೈಗೊಂಡಿದ್ದಾರೆ ಎಂಬುದನ್ನು ಬಹಿರಂಗವಾಗಿ ದಾಖಲೆ ಮೂಲಕ  ಅಥವಾ ಮಾಧ್ಯಮಗಳ ಮೂಲಕ  ಪ್ರಕಟಿಸುವಂತೆ ಮಾಜಿ ಸಚಿವ ಬಿ.ಆರ್. ಯಾವಗಲ್ ಹಾಲಿ ಸಚಿವ ಸಿ.ಸಿ. ಪಾಟೀಲರಿಗೆ ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಧಿಕಾರಕ್ಕೆ ಬಂದ 7 ವರ್ಷದ ನಂತರ ಈಗ ಅಭಿವೃದ್ಧಿ ಕಾಮಗಾರಿ ಆರಂಭ ಮಾಡಿದ್ದು ನೋಡಿದರೆ ಇದೊಂದು ರೀತಿಯಲ್ಲಿ ಚುನಾವಣಾ ಸ್ಟಂಟ್ ಆಗಿದೆ ಎಂದರು. ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಸೋರಿಕೆ ಕಂಡು ಬರುತ್ತಿದೆ. ಕಾಮಗಾರಿಗಳು ಪಾರದರ್ಶಕವಾಗಿ ನಡೆಯಬೇಕು ಎಂದರು.

ಏತ ನೀರಾವರಿ ಯೋಜನೆಗಳು ಇನ್ನು ಆರಂಭಗೊಂಡಿಲ್ಲ. ಗ್ರಾಮೀಣ ರಸ್ತೆಗಳು ಹಾಗೆ ಉಳಿದಿವೆ. ಕಾಲುವೆಗಳಿಗೆ ಸರಿಯಾಗಿ ನೀರು ತಲುಪದೇ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಸಚಿವರು ಇದರ ಬಗ್ಗೆ ಗಮನ ಹರಿಸುವಂತೆ ಯಾವಗಲ್ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದ್ಯಾಮಣ್ಣ ಸವದತ್ತಿ, ವಿಠ್ಠಲ ಶಿಂಧೆ, ರಾಜು ಕಲಾಲ, ಮಹಾಂತೇಶ ತಳವಾರ, ವೈ.ಎಫ್. ಸಂಗ್ರೇಶಿ, ಗುರುಪಾದಪ್ಪ ಕುರಹಟ್ಟಿ ಹಾಜರಿದ್ದರು. 

ಸಿಂಡಿಕೇಟ್ ಬ್ಯಾಂಕ್; ಗ್ರಾಹಕರ ಸಮಾವೇಶ
ಗದಗ: ಸಮೀಪದ ಹುಲಕೋಟಿಯಲ್ಲಿ ಇತ್ತೀಚೆಗೆ ಸಿಂಡಿಕೇಟ್ ಬ್ಯಾಂಕಿನ ವತಿಯಿಂದ ಗ್ರಾಹಕರ ಸಮಾವೇಶ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಸತೀಶ್ ಹೊಂಬಾಳಿ ವಹಿಸಿದ್ದರು. ಅತಿಥಿಗಳಾಗಿ ಗ್ರಾಮದ ಹಿರಿಯ ನಾಗರಿಕರಾದ ಚಂದ್ರಗೌಡ ಮರಿಯಪ್ಪಗೌಡರ ಡಾ.ಶಿವಪ್ಪ ಚವಡಿ ಮತ್ತಿತರರು ಹಾಜರಿದ್ದರು.
ಬ್ಯಾಂಕಿನ ವ್ಯವಸ್ಥಾಪಕ ಡಿ.ಜಿ.ಹೆಗಡೆ ಮಾತನಾಡಿದರು. ಕೆ. ಪ್ರಭಾಕರ ನಿರೂಪಿಸಿದರು.

ಖೋ-ಖೋ ಸಾಧನೆ
ಗದಗ:
ಇಲ್ಲಿನ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತಿಚೆಗೆ ಧಾರವಾಡದಲಿ ್ಲನಡೆದ ಕವಿವಿ ಮಹಿಳೆಯರ ಖೋ-ಖೋ ಟೂರ್ನಿಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಮಹಿಳೆಯರ ಖೋ ಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ನಿರ್ಮಲಾ ಬಾರಕೇರ ಕವಿವಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.