ADVERTISEMENT

ಸಮಸ್ಯೆ ಸುಳಿಯಲ್ಲಿ ಸಿಲುಕಿದ ಮಾವು ಬೆಳೆಗಾರ

ಚಂದ್ರಕಾಂತ ಬಾರಕೇರ
Published 6 ಮೇ 2014, 9:01 IST
Last Updated 6 ಮೇ 2014, 9:01 IST

ಗಜೇಂದ್ರಗಡ: ವಿವಿಧ ಬೆಳೆಗಳನ್ನು ಬೆಳೆದು ಕೈಸುಟ್ಟು­ಕೊಂಡಿದ್ದ ಕೊಳವೆ ಬಾವಿ ಆಶ್ರಿತ ಕೃಷಿಕರು ಎರಡು ದಶಕದಿಂದೀಚೆಗೆ ಹಣ್ಣುಗಳ ರಾಜ ‘ಮಾವು’ ನತ್ತ ಒಲವು ತೋರಿದ್ದಾರೆ. ನಿರೀಕ್ಷೆಗೂ ಮೀರಿ ಮಾವು ಬೆಳೆದ ಪರಿಣಾಮ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ವೈಜ್ಞಾನಿಕ ಬೆಲೆ ಇಲ್ಲದೇ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.

ನೀರಾವರಿ ಯೋಜನೆಯನ್ನು ಹೊಂದಿರದ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ 59.29 ಸಾವಿರ ಹೆಕ್ಟೇರ್‌್ ಪ್ರದೇಶದಲ್ಲಿ ವಿವಿಧ ಬಗೆಯ ಮಾವು ಬೆಳೆ­ಯ­ಲಾಗಿದೆ. ನದಿ–ನಾಲೆಗಳಿಲ್ಲದ ರೋಣ ತಾಲ್ಲೂಕಿ­ನಾದ್ಯಂತ ಅಸಮರ್ಪಕ ಮಳೆ, ವಿದ್ಯುತ್‌್ ಕಣ್ಣಾ–ಮುಚ್ಚಾಲೆ, ಕುಸಿಯುತ್ತಿರುವ ಅಂತರ್ಜಲ ...ಹೀಗೆ ಹತ್ತಾರು ಸಮಸ್ಯೆಗಳ ಸರಮಾಲೆಯ ನಡುವೆಯೂ ಪರಿಶ್ರಮದಿಂದ ಮಾವು ಬೆಳೆ­ಯನ್ನು ಸಂರಕ್ಷಿಸಿ, ಪೋಷಿಸುತ್ತಿದ್ದಾರೆ.

ಆದರೆ, ಬೆಳೆ ನಿರೀಕ್ಷೆಗೂ ಮೀರಿ ಹಣ್ಣು–ಕಾಯಿ­ಗಳನ್ನು ಬಿಟ್ಟಾಗ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯದಿರುವುದು ಬೆಳೆಗಾರ ಸಮೂಹವನ್ನು ಚಿಂತೆಗೀಡು ಮಾಡಿದೆ. ಪ್ರತಿ ವರ್ಷ ಏಪ್ರಿಲ್‌ ಜೂನ್‌ ವರೆಗೂ ಮಾವಿನ ಹಂಗಾಮು ಬಂತೆಂದರೆ ನಗರ ಹಾಗೂ ಗ್ರಾಮೀಣ ಮಾರುಕಟ್ಟೆಯಲ್ಲಿ ಮಾವಿನದ್ದೇ ದರ್ಬಾರ್‌. ಅದರಲ್ಲೂ ಈಚೆಗಿನ ಕೆಲವು ವರ್ಷ­ಗಳಲ್ಲಿ ಈ ಭಾಗದಿಂದ ಉತ್ತರ ಭಾರತಕ್ಕೆ ವ್ಯಾಪಕ ಪ್ರಮಾಣದಲ್ಲಿ ಮಾವು ರವಾನೆಯಾಗುತ್ತಿದೆ.

ಇಷ್ಟೆಲ್ಲ ಹಿರಿಮೆ–ಗರಿಮೆ ಹೊಂದಿರುವ ರೋಣ ತಾಲ್ಲೂಕಿನ ಮಾವಿಗೆ ಪ್ರಾಧಾನ್ಯತೆ ವಹಿವಾಟು ನಡೆಯುತ್ತಿದ್ದರೂ ತಾಲ್ಲೂಕಿನ ಯಾವೊಂದು ನಗರದಲ್ಲಿಯೂ ಸುಸಜ್ಜಿತ ಮಾವಿನ ಮಾರುಕಟ್ಟೆ ಇಲ್ಲ. ಮಾವಿನ ಹಂಗಾಮಿ­ನಲ್ಲಿ ತತ್ಕಾಲಿಕ ಅಂಗಡಿಗಳನ್ನು ನಿರ್ಮಿಸಿಕೊಂಡು ವ್ಯಾಪಾರ ಮಾಡಲಾಗುತ್ತಿದೆ.

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೂ ಸಹ ಮಾವಿನ ಮಾರುಕಕಟ್ಟೆ ನಿಯಂತ್ರಣ ಮಾಡುವ ವ್ಯವಸ್ಥೆ ಇಲ್ಲ. ವ್ಯಾಪಾರಸ್ಥರ ಲಾಬಿಗೆ ಮಣಿಯುವ ಕೃಷಿ ಉತ್ಪನ್ನ ಮಾರುಕಟ್ಟೆಯ (ಎಪಿಎಂಸಿ) ಮಾವು ಬೆಳೆಗಾರರ ಹಿತರಕ್ಷಣೆ­ಯನ್ನು ಮೂಲೆ ಗುಂಪು ಮಾಡಲಾಗುತ್ತಿದೆ. ಬೆಳೆ ಮಾರಾಟ ಮಾಡಿದ ರೈತರಿಗೆ ಸಮರ್ಪಕ ಬೆಲೆ, ಸಕಾಲಕ್ಕೆ ಹಣ ನೀಡುವ ವ್ಯವಸ್ಥೆಯೂ ಆಗುತ್ತಿಲ್ಲ. ವರ್ತಕರು ಕೊಟ್ಟಷ್ಟು ತೆಗೆದುಕೊಳ್ಳುವ ಸ್ಥಿತಿ ಬೆಳೆಗಾರರದ್ದಾಗಿದೆ.

ಹೆಚ್ಚಾಗಿ ಮಾವಿನ ಹಣ್ಣನ್ನು ಬೆಳೆಯುವ ಇಲ್ಲಿ ಒಂದೇ ಒಂದು ಮಾವಿನ ಸಂಸ್ಕರಣಾ ಘಟಕ ಇಲ್ಲ­ದಿ­ರುವುದು ವಿಪರ್ಯಾಸ. ಮಾವು ಅಭಿವೃದ್ಧಿಗೆ ಮಂಡಳಿಯನ್ನೂ ಸಹ ಸ್ಥಾಪಿಸಲಾಗಿಲ್ಲ. ಹಳೆ ಪದ್ಧತಿಗೆ ಜೋತು ಬಿದ್ದಿರುವ ರೈತರಿಗೆ ಆಧುನಿಕ ವಿಧಿ ವಿಧಾನ ಮತ್ತು ತಂತ್ರಜ್ಞಾನ ಪರಿಚಯ ಮಾಡಿಸಿ ಉತ್ಪಾದನೆ ಪ್ರಮಾಣ ಮತ್ತು ಗುಣ­ಮಟ್ಟ ಉತ್ತಮ ಪಡಿಸುವ ಕೆಲಸ ಮಾಡಬೇಕು ಎಂಬ ದಶಕಗಳ ಬೇಡಿಕೆಗೂ ಸರ್ಕಾರ ಇದುವರೆಗೂ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.

ಸರ್ಕಾರದ ಅಸಡ್ಡೆ ರೀತಿಯಲೇ ರೈತರಲ್ಲೂ ಸಹ ಸಂಘಟನೆ ಕೊರತೆ ಇರುವುದು ಶೋಷಣೆಗೆ ಕಾರಣವಾಗಿದೆ. ಇದುವರೆಗೂ ಒಂದೇ ಒಂದು ಮಾವು ಬೆಳೆಗಾರರ ಸಂಘಟನೆ ಇಲ್ಲ. ಕೆಲ ವರ್ಷಗಳ ಹಿಂದೆ ಸಹಕಾರ ಸಂಘವೊಂದರ ಮೂಲಕ ಮಾವು ಸಂಸ್ಕರಣಾ ಘಟಕ ತೆರೆಯುವ ಪ್ರಯತ್ನ ನಡೆದರೂ ಅದೂ ವಿಫಲವಾಯಿತು.

‘ಸರ್ಕಾರ ಮಾವು ಬೆಳೆಗಾರರನ್ನು ಪ್ರೋತ್ಸಾ­ಹಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ಕಾರ ಅಸಡ್ಡೆ ನೀತಿಯಿಂದ ಹೊರ ಬಂದು ಬೆಳೆಗಾರರ ಏಳ್ಗೆಗೆ ಪೂರಕವಾದ ವಾತಾವರಣ ಕಲ್ಪಿಸಬೇಕು. ಅಲ್ಲದೆ, ಮಾವು ಸಂಸ್ಕಾರಣಾ ಘಟಕ ಸ್ಥಾಪನೆಗೂ ಮುಂದಾಗಬೇಕು’ ಎಂದು ಜಿಲ್ಲಾ ಹಣ್ಣು ಬೆಳೆಗಾರರ ಸಂಘದ ಆಧ್ಯಕ್ಷ  ವೀರನಗೌಡ ಗೌಡರ ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT