ADVERTISEMENT

ಸಾರಸ್ವತ ಲೋಕ ಬೆಳಗಿದ ಅಬ್ಬಿಗೇರಿಯ ಹುಡುಗ

ಪುಟ್ಟ ಗ್ರಾಮದಿಂದ ವಿಮರ್ಶಾ ಲೋಕದ ಉತ್ತುಂಗಕ್ಕೆ ಬೆಳೆದ ಗಿರಡ್ಡಿ

​ಪ್ರಜಾವಾಣಿ ವಾರ್ತೆ
Published 13 ಮೇ 2018, 10:44 IST
Last Updated 13 ಮೇ 2018, 10:44 IST
ಅಬ್ಬಿಗೇರಿ ಗ್ರಾಮದಲ್ಲಿ ಗಿರಡ್ಡಿ ಅವರ ನಿವಾಸದ ಎದುರು ಶನಿವಾರ ಸೇರಿದ್ದ ಅವರ ಒಡನಾಡಿಗಳು, ಸ್ನೇಹಿತರು
ಅಬ್ಬಿಗೇರಿ ಗ್ರಾಮದಲ್ಲಿ ಗಿರಡ್ಡಿ ಅವರ ನಿವಾಸದ ಎದುರು ಶನಿವಾರ ಸೇರಿದ್ದ ಅವರ ಒಡನಾಡಿಗಳು, ಸ್ನೇಹಿತರು   

ನರೇಗಲ್‌: ಅಬ್ಬಿಗೇರಿ ಗ್ರಾಮದ, ಗ್ರಾಮ ಪಂಚಾಯ್ತಿ ಕಟ್ಟಡದ ಸಮೀಪದ ‘ಶ್ರೀಶೈಲ ಸದನ’ದಲ್ಲಿ ಶನಿವಾರ ಬೆಳಿಗ್ಗೆ ಮೌನ ನೆಲಸಿತ್ತು. ಮನೆಯೊಳಗೆ ಜನರ ಓಡಾಟ ಇರಲಿಲ್ಲ. ಗಿರಡ್ಡಿ ಗೋವಿಂದರಾಜ ಅವರು ಹುಟ್ಟಿ, ಬೆಳೆದ ಮೂಲ ಮನೆ ಇದು. ಈ ಮನೆಯ ಎದುರು ಅವರೊಂದು ಬೇವಿನ ಗಿಡ ನೆಟ್ಟು ಬೆಳೆಸಿದ್ದರು. ಆ ಬೇವಿನ ಮರದ ಕುರಿತು ಕಥೆಯೊಂದನ್ನೂ ಬರೆದಿದ್ದರು. ಸ್ವಗ್ರಾಮ ಅಬ್ಬಿಗೇರಿ ಕುರಿತು ಅವರು ಹೊಂದಿದ್ದ ನಂಟನ್ನು ಈ ‘ಒಂದು ಬೇವಿನ ಮರದ ಕಥೆ’ ಬಿಚ್ಚಿಡುತ್ತದೆ.

ಆ ಮರ ಈಗ ಇಲ್ಲ. ಮನೆಯ ಆವರಣದಲ್ಲಿ ತೆಂಗಿನ ಮರವೊಂದು ಬೆಳೆದು ನಿಂತಿದೆ. ಗಿರಡ್ಡಿ ಅವರು ಧಾರವಾಡದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಹೈದರಾಬಾದ್‌ನ ಸೆಂಟ್ರಲ್‌ ಇನ್ಸ್ಟಿಟ್ಯೂಟ್‌ನಲ್ಲಿ ಇಂಗ್ಲಿಷ್‌ ಭಾಷಾ ಅಧ್ಯಯನಕ್ಕೆ ಸೇರಿಕೊಂಡಿದ್ದರು. ಆ ಸಂದರ್ಭದಲ್ಲಿ ತಂದೆ ಅಂದಾನಪ್ಪ ತಾಯಿ ಸಂಗಮ್ಮ ಅವರನ್ನು ಕಳೆದುಕೊಂಡಿದ್ದರು. ಇಬ್ಬರ ಅಂತ್ಯಕ್ರಿಯೆಗೂ (ಮಣ್ಣಿಗೆ) ಸ್ವಗ್ರಾಮಕ್ಕೆ ಬರಲು ಅವರಿಗೆ ಆಗಿರಲಿಲ್ಲ. ಈ ನೋವಿನಲ್ಲಿಅವರು ಬರೆದ ಕಥೆ ‘ಮಣ್ಣು’.

ಅಬ್ಬಿಗೇರಿ ಗ್ರಾಮದಲ್ಲಿ ಅವರ ಕಿರಿಯ ಪುತ್ರ ಅನ್ನದಾನಪ್ಪ ಗಿರಡ್ಡಿ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅವರ ಸ್ನೇಹಿತರು, ಒಡನಾಡಿಗಳು, ಶಿಷ್ಯಂದಿರು ಸೇರಿದ್ದರು.

ADVERTISEMENT

‘ತಾವೊಬ್ಬ ವಿಮರ್ಶಕ, ಇಂಗ್ಲಿಷ್‌ ಪಂಡಿತ ಎನ್ನುವ ಯಾವ ಬಿಗುಮಾನವೂ ಇಲ್ಲದೆ ಅವರು ಎಲ್ಲರೊಂದಿಗೆ ಬೆರೆಯುತ್ತಿದ್ದರು.

ಅಬ್ಬಿಗೇರಿಯಂತಹ ಹಳ್ಳಿಯ ಒಬ್ಬ ಸಾಮಾನ್ಯ ಹುಡುಗ, ಇಂಗ್ಲಿಷ್‌ ಭಾಷೆಯಲ್ಲಿ ಪ್ರಭುತ್ವ ಸಾಧಿಸಿ, ಎಂತಹ ಎತ್ತರಕ್ಕೆ ಬೇಕಾದರೂ ಏರಬಹುದು ಎನ್ನುವುದನ್ನುಅವರು ತಮ್ಮ ಜೀವನದಿಂದ ತೋರಿಸಿಕೊಟ್ಟರು. ಅವರೆಂದೂ ಸಾಹಿತ್ಯದ ರಾಜಕಾರಣ ಮಾಡಲಿಲ್ಲ. ಇಲ್ಲದಿದ್ದರೆ ಎಂದೋ ಅವರಿಗೆ ನಾಡೋಜ, ಪಂಪ ಪ್ರಶಸ್ತಿಗಳು ಬರುತ್ತಿದ್ದವು. ಎಂದೂ ಸ್ವಂತ ಊರನ್ನು ಮರೆಯಲಿಲ್ಲ. ಅವರ ಬೇರುಗಳು ಇದ್ದದ್ದು ಇದೇ ಗ್ರಾಮದಲ್ಲಿ’ ಎಂದು ಮಹೇಶ್‌ ತಿಪ್ಪಶೆಟ್ಟಿ, ಎಸ್‌.ಎಸ್‌. ಹರ್ಲಾಪುರ, ಡಾ.ಶಂಭು ಬಳಿಗಾರ, ಬಿ.ಎಸ್‌.ಶಿರೋಳ ಅವರು ನೆನಪುಗಳನ್ನು ಹಂಚಿಕೊಂಡರು.

ಶಾಲಾ ದಿನಗಳಲ್ಲೇ ಸಾಹಿತ್ಯದ ಆಸಕ್ತಿ ಹೊಂದಿದ್ದ ಇವರು 1956ರಲ್ಲಿ ‘ಶಾರದಾ ಲಹರಿ’ ಎಂಬ ಕವಿತೆ ಬರೆದು ಪ್ರಕಟಿಸಿದರು. ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ‘ರಸವಂತಿ’ ಎಂಬ ಕವನ ಸಂಕಲನ ಪ್ರಕಟವಾಯಿತು.

ಸ್ನೇಹಿತರಾದ ಚಂಪಾ, ಸಿದ್ದಲಿಂಗ ಪಟ್ಟಣಶೆಟ್ಟಿ ಅವರೊಂದಿಗೆ ಸೇರಿಕೊಂಡು ‘ಸಂಕ್ರಮಣ’ ಪತ್ರಿಕೆ ಹೊರ ತಂದರು. ಇದರ ಮೂಲಕ ವಿಮರ್ಶೆ ಪ್ರಾರಂಭಿಸಿದರು.

ಧಾರವಾಡದಲ್ಲಿ ನೆಲೆಸಿದ್ದರೂ, ಪ್ರತಿ ಬಾರಿ ಎಪ್ರಿಲ್, ಮೇ, ಅಕ್ಟೋಬರ್ ತಿಂಗಳಲ್ಲಿ ರಜೆ ಅವಧಿಯಲ್ಲಿ ಸ್ವಗ್ರಾಮಕ್ಕೆ ಕುಟುಂಬ ಸಮೇತ ಬಂದು ಇರುತ್ತಿದ್ದರು. ಗ್ರಾಮಕ್ಕೆ ಬಂದಾಗ ಯುವಕರಿಗೆ, ವಿದ್ಯಾರ್ಥಿಗಳಿಗೆ ಸಾಹಿತ್ಯದ ರುಚಿ ಉಣಬಡಿಸುತ್ತಿದ್ದರು.

‘ಸ್ಥಳೀಯ ಜನರ ಕಷ್ಟಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ, ಸ್ನೇಹಿತರೊಂದಿಗೆ ತರುಣ ಸಂಘ ಸ್ಥಾಪಿಸಿದ್ದರು. ಇದರ ಮೂಲಕ ಶೈಕ್ಷಣಿಕ, ಆರೋಗ್ಯ, ಸಾಹಿತ್ಯ, ಸ್ವಚ್ಚತಾ ಆಂದೋಲನ, ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಕಲಿಕಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು’ ಎಂದು ಅವರ ಆತ್ಮೀಯ ಸ್ನೇಹಿತ ಡಾ.ಆರ್.ಬಿ. ಬಸವರಡ್ಡೇರ ನೆನಪು ಮಾಡಿಕೊಂಡರು.

ಕಲ್ಬುರ್ಗಿಯಲ್ಲಿ ‘ರಂಗ ಮಾಧ್ಯಮ’ ಎಂಬ ನಾಟಕ ಸಂಘ ಸ್ಥಾಪಿಸಿ ಹಲವು ನಾಟಕಗಳಲ್ಲಿ ನಟಿಸಿ, ನಿರ್ದೇಶನ ಮಾಡಿದ್ದನ್ನೂ ಸ್ಮರಿಸಿಕೊಂಡರು.

**
ಇಂಗ್ಲಿಷ್‌ ಭಾಷೆ ಮತ್ತು ವಿಮರ್ಶೆಯಲ್ಲಿ ಗಿರಡ್ಡಿಯದು ಮೇರು ಸಾಧನೆ. ಎಂಎಂ.ಕಲಬುರ್ಗಿ ಅವರ ಜತೆ ಸಂಭ್ರಮ ಸಾಹಿತ್ಯ ಸಂಘಟನೆ ಸ್ಥಾಪಿಸಿ ದೇಶದೆಲ್ಲೆಡೆ ನಾಡಿನ ಹಿರಿಮೆ ಹೆಚ್ಚಿಸಿದ್ದಾರೆ – ಎಸ್.ಎಸ್.ಹರ್ಲಾಪುರ

**

ಗಿರಡ್ಡಿ ಅವರ ಚಿಂತನೆ, ವಿಮರ್ಶೆ, ಸಾಹಿತ್ಯಧ್ವನಿ ಎಂದಿಗೂ ಅಜರಾಮರ. ನಗರ ಮತ್ತು ಹಳ್ಳಿಯನ್ನು ಸಮಾನವಾಗಿ ಕಂಡ ಅಪರೂಪದ ಸಾಧಕ
– ಡಾ.ಶಂಭು ಬಳಿಗಾರ

**
‘ಕನ್ನಡ ಸಾರಸ್ವತ ಲೋಕದ ಅಪ್ಪಟ ಪ್ರತಿಭೆ ಗಿರಡ್ಡಿ ಗೋವಿಂದರಾಜ. ತಮ್ಮ ಸಾಹಿತ್ಯ ಕೃಷಿ ಮೂಲಕ ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿ ಗದಗ ಜಿಲ್ಲೆಗೆ ಹಿರಿಮೆ, ಗರಿಮೆ ತಂದವರು
 – ಎಚ್‌.ಕೆ ಪಾಟೀಲ, ಕಾಂಗ್ರೆಸ್‌ ಮುಖಂಡ

ಚಂದ್ರು ಎಂ. ರಾಥೋಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.