ADVERTISEMENT

ಸಾಲ: ರೈತರಿಗೆ ಬ್ಯಾಂಕ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 6:45 IST
Last Updated 7 ಜನವರಿ 2014, 6:45 IST

ಗದಗ: ಸಾಲ ಮರುಪಾವತಿಸುವಂತೆ ಯೂನಿ­ಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಧಿಕಾರಿಗಳು ನೋಟಿಸ್‌ ನೀಡಿ ಒತ್ತಡ ಹೇರುತ್ತಿದ್ದಾರೆ ಎಂದು ಶಿರಹಟ್ಟಿ ತಾಲ್ಲೂಕಿನ ಲಕ್ಷ್ಮೇಶ್ವರದ ರೈತರು ಆರೋಪಿಸಿದ್ದಾರೆ.

ಕೃಷಿ ಚಟುವಟಿಕೆಗಳಿಗೆ ಯೂನಿ­ಯನ್‌ ಬ್ಯಾಂಕ್‌ ಹಾಗೂ ಇತರೆ ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲ ಮಾಡಲಾಗಿದೆ. ಬರಗಾಲದ ಬವಣೆ­ಯಿಂದ ತತ್ತರಿಸುತ್ತಿರುವ ರೈತರು ಜೀವನ ನಡೆಸಲು ಪರದಾಡುತ್ತಿದ್ದಾರೆ. ಸಮರ್ಪಕ ಮಳೆಯಾಗದೆ ಬೆಳೆಗಳು ನಾಶವಾಗಿವೆ. ಸಾಲ ತೀರಿಸಲು ಆಗದ ಪರಿಸ್ಥಿತಿಯಲ್ಲಿ  ಇರುವಾಗ ಬ್ಯಾಂಕ್‌ ಸಿಬ್ಬಂದಿ ನೋಟಿಸ್‌ ಜಾರಿ ಮಾಡಿ ಸಾಲ ಪಾವತಿಸುವಂತೆ ಒತ್ತಡ ಹೇರುತ್ತಿ­ದ್ದಾರೆ.

ಸಾಲ ತೀರಿಸಲು ಕಾಲಾವಕಾಶ ನೀಡುವಂತೆ ಸೋಮವಾರ ರೈತರು ಜಿಲ್ಲಾಧಿಕಾರಿ ಎನ್‌.ಎಸ್‌.­ಪ್ರಸನ್ನ­ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.

ಸಾಲ ವಸೂಲಾತಿಗೆ ಒತ್ತಡ ಹೇರಿದರೆ ದಿಕ್ಕು ತೋಚದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಅನಾಹುತಕ್ಕ ಅವಕಾಶ ನೀಡದೆ  ವಾಣಿಜ್ಯ ಬ್ಯಾಂಕ್‌ಗಳ ಅಧಿಕಾರಿಗಳ ಸಭೆ ಕರೆದು ರೈತರ ಮೇಲೆ ಕ್ರಮ ಜರುಗಿಸುವುದನ್ನು ತಪ್ಪಿಸಬೇಕು. ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದ್ದರೂ ಬ್ಯಾಂಕ್‌ ಅಧಿಕಾರಿಗಳು ಸಾಲ ವಸೂಲಿಗೆ ನೋಟಿಸ್‌ ಜಾರಿ ಮಾಡುವ ಮೂಲಕ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮೃದ್ಧ ಮಳೆ ಬಂದು ಬೆಳೆ ಬಂದಿದ್ದರೆ ನಿಗದಿತ ಅವಧಿಯಲ್ಲಿ ರೈತರು ಸಾಲ ತೀರಿಸುತ್ತಿದ್ದರು. ಸಾಲ ತೀರಿಸಲು ಸಾಕಷ್ಟು ಸಮಯ ನೀಡಬೇಕು. ಈ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸದಿದ್ದರೆ ಯಾವುದೇ ರೀತಿಯ ರೈತರ ಆತ್ಮಹತ್ಯೆ­ಗಳಿಗೆ ಸರ್ಕಾರವೇ ಹೊಣೆ ಹೊರ­ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪ್ರಸನ್ನಕುಮಾರ್‌, ಸಂಬಂಧಪಟ್ಟವರ ಜತೆ ಚರ್ಚಿಸಿ ಕ್ರಮ ಕೈಗೊಳ್ಳ­ಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಬಿ. ಗಣಾಚಾರಿ, ಚಿನ್ನಯ್ಯ, ಬಾಳೇಸಾಬ ನದಾಫ, ಕೊಟ್ರಪ್ಪ ಅಂಗಡಿ, ಎನ್‌.ಬಿ.ಪಾಟೀಲ, ಶಿವಬಸಪ್ಪ, ಎ.ಬಿ.ಮಾಗಡಿ, ದೇವಪ್ಪ ಮಾಗಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.