ADVERTISEMENT

ಸಿಐಟಿಯು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 6:34 IST
Last Updated 15 ಜೂನ್ 2013, 6:34 IST

ನರಗುಂದ: ಸಿಐಟಿಯು  ಜಿಲ್ಲಾ ಹಾಗೂ ತಾಲ್ಲೂಕು ಸಮಿತಿ ಸದಸ್ಯರು ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಿನಿ ವಿಧಾನಸೌಧದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಮುಖಂಡ ಮಹಾಗುಂಡಪ್ಪ ಅಂಗಡಿ  ಮಾತನಾಡಿ, `ಈಗಾಗಲೇ ರಾಜ್ಯ ಸರ್ಕಾರಕ್ಕೆ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಲವಾರು ಸಲ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರ ನಿರಂತರ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿದ್ದು ಇದರಿಂದ ಕಾರ್ಮಿಕರಿಗೆ ನ್ಯಾಯ ಸಿಗದಂತಾಗಿದೆ.

ಆದ್ದರಿಂದ ಕಾರ್ಮಿಕ ವಿರೋಧಿ ನೀತಿ ಕೈ ಬಿಟ್ಟು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು. ಕಾರ್ಮಿಕರಿಗೆ ಸಂಬಂಧಿಸಿದಂತೆ ಎಪಿಎಲ್-ಬಿಪಿಎಲ್ ಎಂದು ಮೀನಾಮೇಷ ಮಾಡದೇ ಕೂಡಲೇ ಎಲ್ಲಾ ಕುಟುಂಬಗಳಗೆ ಕನಿಷ್ಟ ಆಹಾರ ಧಾನ್ಯ ವಿತರಿಸುವಲ್ಲಿ ಕ್ರಮಕೈಗೊಳ್ಳಬೇಕು.

ಕನಿಷ್ಟ ವೇತನ ಜಾರಿಗೊಳಿಸಬೇಕು. ಕನಿಷ್ಟ ವೇತನ ಮಂಡಳಿ ಜಾರಿ ಮಾಡಿದ  ಶಿಫಾರಸ್ಸನ್ನು ಅನುಷ್ಟಾನಗೊಳಿಸಬೇಕು. ಕೇಂದ್ರ ಸರ್ಕಾರದ ರೀತಿಯಲ್ಲಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕರ ಸಮ್ಮೇಳನ ನಡೆಸಬೇಕು. ಸರ್ಕಾರ ವಿವಿಧ  ತ್ರಿಪಕ್ಷೀಯ ಸಮಿತಿ ರಚಿಸುವಾಗ  ಕಾರ್ಮಿಕರ ಸಂಘಟನೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.

ಗುತ್ತಿಗೆ  ಕಾರ್ಮಿಕ ಪದ್ಧತಿ ಕೈ ಬಿಟ್ಟು  ಕಾಯಂ ಕಾರ್ಮಿಕರನ್ನು ನೇಮಕಗೊಳಿಸಬೇಕು. ಎಲ್ಲಾ ಕಾರ್ಮಿಕರಿಗೂ ನಿವೇಶನ  ಮತ್ತು ವಸತಿಯನ್ನು ಉಚಿತವಾಗಿ ನೀಡಬೇಕು. ಸರ್ಕಾರದ ಒಡೆತನದ  ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸಬೇಕು.

45ನೇ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನ ಪ್ರಕಾರ ಸರ್ಕಾರಗಳ ವಿವಿಧ ಯೋಜನೆಗಳಲ್ಲಿ  ನೇಮಕಗೊಂಡ ಅಂಗನವಾಡಿ, ಬಿಸಿಯೂಟ, ಆಶಾ,  ಕಂಪ್ಯೂಟರ್ಸ್‌ ಆಪರೇಟರ್‌ಗಳನ್ನು  ಖಾಯಂಗೊಳಿಸುವಂತೆ  ಆಗ್ರಹಿಸಿದರು.

ಆರ್.ಎಚ್.ಹೆಗಡೆ, ಎಸ್.ಎಸ್. ಬೆಳವಣಕಿ, ಮಿಯಾಸಾಬ ನದಾಫ್, ಅಲಿಸಾಬ ಮನದಲಿ, ಎಂ.ಎಂ. ಬೀಳಗಿ, ಅಡಿವೆಪ್ಪ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.