ADVERTISEMENT

ಸುಂಕಾಪುರ ಸಾಹಿತ್ಯದಲ್ಲಿ ನವರಸ ಜೀವಂತಿಕೆ’

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 6:40 IST
Last Updated 13 ಅಕ್ಟೋಬರ್ 2017, 6:40 IST

ಗದಗ: ‘ನಾಟಕ, ಹರಟೆ, ಪ್ರಬಂಧಗಳನ್ನು ಒಳಗೊಂಡಿರುವುದೇ ಸೃಜನಶೀಲ ಸಾಹಿತ್ಯ. ಡಾ.ಎಂ.ಎಸ್.ಸುಂಕಾಪುರ ಅವರ ನವಿರಾದ ಸಾಹಿತ್ಯ, ಮೊನಚಾದ ಮಾತುಗಳ ಮೂಲಕ ಸಮಾಜವನ್ನು ತಿದ್ದುವ ಹಾಗೂ ಜಾಗೃತಗೊಳಿಸುವ ಕಾರ್ಯ ಮಾಡಿದ್ದಾರೆ’ ಎಂದು ಡಾ.ಅರ್ಜುನ ಗೊಳಸಂಗಿ ಹೇಳಿದರು.

ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಈಚೆಗೆ ನಡೆದ ಡಾ.ಎಂ.ಎಸ್.ಸುಂಕಾಪುರ ವಿಚಾರ ಸಂಕಿರಣ ಹಾಗೂ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನಗೆ ಇಲ್ಲದ ಮನೆ ದೇವರಿಲ್ಲದ ಗುಡಿಯಂತೆ’ ಎಂದು ಭಾವಿಸುವ ಸುಂಕಾಪುರರ ಸಾಹಿತ್ಯ ಶೃಂಗಾರ, ಹಾಸ್ಯ ಸೇರಿ ನವರಸ ಜೀವಂತಿಕೆ ಹಾಗೂ ಜೀವನಾನುಭವದ ಸಾಹಿತ್ಯವಾಗಿದ. ಅವರ ಏಕಾಂಕ ನಾಟಕ ಶೈಲಿ ಮೆಚ್ಚುವಂತಹದ್ದು, ರೇಡಿಯೋ ನಾಟಕದ ಬರವಣಿಗೆ ಬಹು ಕಷ್ಟ, ಆದರೂ ಅದನ್ನು ಅತ್ಯುತ್ತಮವಾಗಿ ಸುಂಕಾಪುರ ನಿಭಾಯಿಸಿದರು’ ಎಂದರು.

ADVERTISEMENT

‘ಮುಳಗುಂದ ನಾಡು ಒಂದು ಪರಿಚಯ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಆರ್.ಆರ್.ಪಟ್ಟಣ ಅವರು, ‘ಮುಳಗುಂದ ಶಾಸನಗಳಲ್ಲಿ ಚಾತುರ್ಯಗ ಪಟ್ಟಣವೆಂದು ಪ್ರಸಿದ್ಧಿ ಪಡೆದಿದೆ. 1ನೇ ಶತಮಾನದ ಇತಿಹಾಸ ಕುರಿತು ಗ್ರೀಕ್ ಇತಿಹಾಸ ತಜ್ಞ ಟಾಲೆಮಿ ಇದನ್ನು ಉಲ್ಲೇಖಿಸಿದ್ದರು. ಅಲ್ಲದೆ ಅಮೋಘ ವರ್ಷ ನೃಪತುಂಗನ ಶಾಸನದಿಂದ ನಮಗೆ ಮುಳಗುಂದದ ಇತಿಹಾಸ ತಿಳಿದು ಬರುತ್ತದೆ. ನಗೆಗಾರ ನಯಸೇನನ ‘ಧರ್ಮಾಮೃತ’ ಕೃತಿ ಚಂಪೂ ಶೈಲಿಯ, ದೇಸಿಯತೆಯ ವಿಡಂಬನೆಯಿಂದ ಕೂಡಿದೆ’ ಎಂದರು.

‘ಆಧ್ಯಾತ್ಮ ಕ್ಷೇತ್ರದಲ್ಲಿ ಬಾಲಲೀಲಾ ಮಹಾಂತ ಶಿವಯೋಗಿಗಳು ‘ಕೈವಲ್ಯ ದರ್ಪಣ’ ಎಂಬ ಕೃತಿ ರಚಿಸಿ ಮುಳಗುಂದದ ಕೀರ್ತಿ ಹೆಚ್ಚಿಸಿದ್ದಾರೆ. ಕವಿರತ್ನ ಕವಿಚಕ್ರವರ್ತಿ ಎಂದು ಬಿರುದಾಂಕಿತ ರನ್ನನ ಗುರುಗಳು ಜೈನರ ವಿದ್ಯಾ ಕೇಂದ್ರವೆಂದೇ ಪ್ರಖ್ಯಾತಿ ಪಡೆದ ಮುಳಗುಂದದಲ್ಲಿ ವಾಸವಾಗಿದ್ದರು. 9ನೇ ವಿಕ್ರಮಾದಿತ್ಯನ ಕಾಲದಲ್ಲಿ ಇದು ರಾಜಧಾನಿಯಾಗಿತ್ತು’ ಎಂದು ತಿಳಿಸಿದರು.

ಡಾ.ಎಂ.ಎಸ್.ಸುಂಕಾಪುರರವರ ಜೀವನ ಸಾಧನೆ, ವ್ಯಕ್ತಿತ್ವ ವಿಶೇಷತೆ ಕುರಿತು ಕೆ.ಎಸ್.ಎಸ್. ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶರಣಬಸವ ವೆಂಕಟಾಪುರ ಉಪನ್ಯಾಸ ನೀಡಿದರು. ‘ಅಧ್ಯಯನಶೀಲರಾಗಿದ್ದ ಸುಂಕಾಪುರ ಅವರು ಬಾಗಲಕೋಟೆಯಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು.

ಸುಂಕಾಪುರ ಡಾ.ಆರ್.ಸಿ.ಹಿರೇಮಠ ಜತೆಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ, ಸಂಶೋಧನಾ ಕ್ಷೇತ್ರದಲ್ಲಿ ಮಾರ್ಗದರ್ಶಕರಾಗಿ ಗ್ರಂಥ ಸಂಪಾದನಾ ಶಾಸ್ತ್ರದ ಸಂಪಾದಕರಾಗಿ, ಕೆ.ಜಿ.ಕುಂದಣಗಾರ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಎಂಬ ಪ್ರೌಢ ಪ್ರಬಂಧ ಮಂಡಿಸಿ ಸಂಶೋಧನಾ ಕ್ಷೇತ್ರಕ್ಕೆ ಮೆರುಗು ನೀಡಿದ್ದಾರೆ. ಹಳೆಗನ್ನಡ ಸಾಹಿತ್ಯದ ಕುರಿತು ಆಳವಾಗಿ ಅಧ್ಯಯನ ಮಾಡಿದ ಸುಂಕಾಪುರ, ಕಾವ್ಯ, ಪ್ರಸ್ತಾವನೆ ಪದಕೋಶಗಳೊಂದಿಗೆ ವಿದ್ಯಾರ್ಥಿಗಳಿಗೆ ವಿವರಿಸುತ್ತಿದ್ದ ಬಗೆ ಮೆಚ್ಚುವಂತಹದ್ದು’ ಎಂದರು.

‘ವಚನ ಸಾಹಿತ್ಯ ಸಂಪಾದನೆ’ ಎಂಬ ವಿಷಯದ ಕುರಿತು ಧಾರವಾಡದ ನಿವೃತ್ತ ಪ್ರಾಚಾರ್ಯ ಡಾ.ಸಿ.ಎಂ.ಕುಂದಗೋಳ ಮಾತನಾಡಿ, ವಚನ ಸಂಪಾದನೆ ಸುಲಭ ಕಾರ್ಯವಲ್ಲ. ಆ ಕ್ಷೇತ್ರದ ಅಧ್ಯಯನದಲ್ಲಿ ತೊಡಗಿದಾಗ ಸಂಶೋಧಕನಿಗೆ ಹತ್ತು ಹಲವು ಸಮಸ್ಯೆಗಳು ಎದುರಾಗುತ್ತವೆ. ಅವುಗಳ ಕಾಲ ವಿಮರ್ಶೆ, ವಿಷಯಾನುಕ್ರಮಣಿಕೆ ಅನುಕ್ರಮ ಜೋಡಣೆ, ಸ್ಥಲ ಕಟ್ಟುಗಳ ಮೇಲೆ ಅವುಗಳ ವಿಂಗಡಣೆ, ಮೂಲತ್ವ ಸೇರಿದಂತೆ ವಿವಿಧ ಅಂಶಗಳನ್ನು ಸಂಪಾದಕನು ಚಿಂತಿಸಿ, ತರ್ಕಿಸಿ, ವಿಮರ್ಶೆಗೊಳಪಡಿಸಬೇಕಾಗುತ್ತದೆ.

ಅದರಲ್ಲಿ ಎಂ.ಎಸ್.ಸುಂಕಾಪುರ ಮುಂಚೂಣಿಯಲ್ಲಿ ನಿಲ್ಲುವ ಮೂಲಕ ಯ್ಯೋಮಮೂರ್ತಿ ಅಲ್ಲಮನ ವಚನಗಳು, ಸಕಲ ಪುರಾತನರ ವಚನ ಸಂಗ್ರಹ ಕೋಲಶಾಂತಯ್ಯನಿಂದ ಆದಯ್ಯನವರೆಗಿನ ವಚನಗಳ ಸಂಗ್ರಹ ಕಾರ್ಯ ಸಂಪುಟ–1ರಲ್ಲಿ 4,821 ವಚನಗಳು 2ರಲ್ಲಿ 2,093 ವಚನಗಳು 108 ಶರಣರ 659 ವಚನಗಳ ಸಂಗ್ರಹ ಅದರಲ್ಲಿ 27 ವಚನಕಾರ್ತಿಯರ ವಚನ ಸಂಪಾದನೆ ಕಾರ್ಯ ಪ್ರಮುಖವಾಗಿದೆ’ ಎಂದು ಹೇಳಿದರು.

‘ಈ ವಿಚಾರ ಗೋಷ್ಠಿಯಿಂದ ಸ್ಥಳೀಯ ಚರಿತ್ರೆಯನ್ನು ಕಟ್ಟುವ ಕೆಲಸವಾಗಬೇಕಿದೆ. ಎಂ.ಎಸ್.ಸುಂಕಾಪುರ ಅವರ ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಎಂಬ ಪ್ರೌಢ ಪ್ರಬಂಧ ವಿದ್ವಾಂಸರ, ಪಂಡಿತರ, ಗಮನಸೆಳೆದಿದೆ’ ಎಂದು ಡಾ.ಬಾಳಣ್ಣ ಶೀಗೀಹಳ್ಳಿ ಆಶಯ ವ್ಯಕ್ತಪಡಿಸಿದರು. ಐ.ಎ.ರೇವಡಿ, ಜಯಶ್ರೀ ಶ್ರೀಗಿರಿ, ಎಸ್.ಬಿ.ದೊಡ್ಡಣ್ಣವರ, ಅಶೋಕ ಹಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.