ADVERTISEMENT

ಸೇವಾ ಭದ್ರತೆ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 8:43 IST
Last Updated 4 ಡಿಸೆಂಬರ್ 2017, 8:43 IST

ಗದಗ: ‘ಗ್ರಾಮ ಪಂಚಾಯ್ತಿ ನೌಕರರಿಗೆ ಕನಿಷ್ಠ ವೇತನ ನೀಡಬೇಕು ಹಾಗೂ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಗ್ರಾಮ ಪಂಚಾಯ್ತಿ ನೌಕರರ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಪಿ.ಕುಲಕರ್ಣಿ ಒತ್ತಾಯಿಸಿದರು.

ಇಲ್ಲಿ ನಡೆದ ಗ್ರಾಮ ಪಂಚಾಯ್ತಿ ನೌಕರರ 7ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ‘ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಸರ್ಕಾರ ಕೂಡಲೇ ಸ್ಪಂದಿಸಿ, ನೌಕರರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದರು.

‘ಗ್ರಾಮ ಪಂಚಾಯ್ತಿ ನೌಕರರು ಆರ್‌.ಡಿ.ಪಿ.ಆರ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನೌಕರರಿಗೆ ಬಡ್ತಿ ನೀಡಬೇಕು. ನಿರ್ದಿಷ್ಟ ವೇತನ ಶ್ರೇಣಿ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ನೌಕರರಿಗೆ ಸರಿಯಾಗಿ ವೇತನ ನೀಡಬೇಕು, ನಂತರ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಬೇಕು’ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ನಾಡಗೌಡ್ರ ಹೇಳಿದರು.

‘ಸರ್ಕಾರ 27 ಸಾವಿರ ನೌಕರರನ್ನು ಕಾಯಂಗೊಳಿಸುವ ಭರವಸೆ ನೀಡಿದೆ. ಆದರೆ, ಅದು ಈವರೆಗೂ ಈಡೇರಿಲ್ಲ. ಇದರ ಮೂಲಕ ಹೋರಾಟದ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದೆ. ಬೇಡಿಕೆ ಈಡೇರಿಸುವವರೆಗೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು’ ಎಂದರು.

ಉಪಾಧ್ಯಕ್ಷ ಬಿ.ಐ.ಈಳಗೇರ, ವಿಮಾ ನೌಕರರ ಸಂಘದ ಮುಖಂಡ ಜೆ.ಎಸ್.ತಳವಾರ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜ ಜಕ್ಕಮ್ಮನವರ ಮಾತನಾಡಿದರು. ಜಿಲ್ಲಾ ಘಠಕದ ಅಧ್ಯಕ್ಷ ಬಸವರಾಜ ಮಂತೂರ ಅಧ್ಯಕ್ಷತೆ ವಹಿಸಿದ್ದರು.

ಸಿ.ಐ.ಟಿ.ಯು ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಹಿರೇಮಠ, ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ, ಶಿವರಾಜ ಮೊರಬ, ದುಂಡಮ್ಮ ಬಳೆಗಾರ, ಕೊಟ್ರೇಶ ಓಲಿ, ತುಕಾರಾಂ ಹುಲಗಣ್ಣವರ, ರುದ್ರಗೌಡ ಸಂಕನಗೌಡ್ರ ಇದ್ದರು.

ಕಾರ್ಯಕ್ರಮಕ್ಕೂ ಮೊದಲು ಇಲ್ಲಿನ ನಗರಸಭೆ ಆವರಣದಿಂದ ಮಹಾತ್ಮ ಗಾಂಧಿ ವೃತ್ತ, ತೋಂಟದಾರ್ಯ ಮಠ, ರೋಟರಿ ವೃತ್ತ, ಭೂಮರಡ್ಡಿ ವೃತ್ತದ ಮೂಲಕ ವಿವೇಕಾನಂದ ಸಭಾಭವನದವರೆಗೆ ಜಾಥಾ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.