ADVERTISEMENT

ಸೋಮೇಶ್ವರ ದೇಗುಲಕ್ಕೆ ಹೊಸ ರೂಪ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 9:15 IST
Last Updated 19 ಜುಲೈ 2012, 9:15 IST

ಗದಗ: ತಾಲ್ಲೂಕಿನ ಕೋಟುಮಚಗಿ ಗ್ರಾಮದ ಐತಿಹಾಸಿಕ ಸೋಮೇಶ್ವರ ದೇವಸ್ಥಾನ ಬಹಳ ದಿನಗಳ ಬಳಿಕ ಹೊಸ ರೂಪು ಪಡೆದುಕೊಳ್ಳುತ್ತಿದೆ.

ಪಾಳು ಬಿದ್ದಿರುವ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ದೇಗುಲದ ನವೀಕರಣಕ್ಕೆ ಟ್ರಸ್ಟ್ ಮತ್ತು ಭಕ್ತರು ಮುಂದಾಗಿರುವುದು ಗ್ರಾಮದ ಜನತೆಯಲ್ಲಿ ಸಂತಸ ಉಂಟು ಮಾಡಿದೆ.

ದೇವಸ್ಥಾನದ ಬಲಭಾಗದಲ್ಲಿ ಊಟದ ಸಭಾಂಗಣ, ಎದುರಿಗೆ ಅಡುಗೆ ಕೋಣೆ, ಎಡ ಭಾಗ ಮದುವೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ವೇದಿಕೆ ನಿರ್ಮಾಣ, ಸ್ನಾನ ಗೃಹ, ಆಸನ ವ್ಯವಸ್ಥೆ, ಕೆರೆ ಅಭಿವೃದ್ಧಿ, ಹೊಂಡ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿ ಭರದಿಂದ ಸಾಗಿವೆ.

ಈಗಾಗಲೇ ದೇವಸ್ಥಾನ ಒಳಗಿನ ಗೋಡೆ, ಕಂಬಗಳಿಗೆ ಟೈಲ್ಸ್ ಹೊಂದಿಸಲಾಗಿದೆ.  ದ್ವಾರಬಾಗಿಲು ಮೇಲೆ ಬಸವಣ್ಣ ಮೂರ್ತಿ, ಅದರ ಹಿಂದುಗಡೆ ಈಶ್ವರ ಲಿಂಗು ಸ್ಥಾಪನೆ ಮಾಡಲಾಗಿದ್ದು, ನೋಡುಗರನ್ನು ಹೆಚ್ಚು ಆಕರ್ಷಿಸುತ್ತಿದೆ. 

ದೇವಸ್ಥಾನದ ಹಿನ್ನೆಲೆ
ಕೋಟುಮಚಗಿ ಗ್ರಾಮ ಕೆಲ ಶಾಸನಗಳ ಪ್ರಕಾರ 16ನೇ ಶತಮಾನದ ರಾಷ್ಟ್ರಕೂಟ ಅರಸರ ಕಾಲದಲ್ಲಿ ಸೇರಿತ್ತು. ಕ್ರಿ.ಶ. 11-12ನೇ ಶತಮಾನದಲ್ಲಿ ಪ್ರಾಚೀನ ವಿದ್ಯಾ ಕೇಂದ್ರವಾಗಿ ಪ್ರಸಿದ್ಧಿ ಪಡೆದ ಅಗ್ರಹಾರವಾಗಿತ್ತು ಎಂಬ ಉಲ್ಲೇಖಗಳಿವೆ.

ಕ್ರಿ.ಶ. 1142 ರಲ್ಲಿ ಆಳ್ವಿಕೆ ನಡೆಸಿದ ಕಲ್ಯಾಣ ಚಾಲುಕ್ಯರ 2ನೇ ಜಗದೇಕಮಲ್ಲನ ಮಹಾ ಪ್ರಧಾನ ದಂಡನಾಯಕ ಕೇಶಿರಾಜನಿಂದ ಸೋಮೇಶ್ವರ ದೇವರಿಗೆ ಸುಂಕ ದಾನದ ವಿಷಯ ಉಲ್ಲೆೀಖವಿದೆ. ಆದ್ದರಿಂದ 11 ನೇ ಶತಮಾನಕ್ಕೂ ಪೂರ್ವದಲ್ಲಿ ದೇವಸ್ಥಾನ ನಿರ್ಮಾಣವಾಗಿರುವ ಪ್ರತೀತಿ ಇದೆ.

ದೇವಸ್ಥಾನದ ಪಕ್ಕದಲ್ಲಿ 15 ಎಕರೆಗೂ ಹೆಚ್ಚು ವಿಸ್ತಾರವಾದ ಕೆರೆ. ಪ್ರಾಚೀನ ಜೈನ ಬಸದಿಗಳು ಮತ್ತು ಪ್ರಭುಲಿಂಗ ಲಿಲೇ ಬರೆದ ಕವಿ ಚಾಮರಸನ ಜನ್ಮಸ್ಥಳ ನಾರಾಯಣಪುರ ಗ್ರಾಮ ಇಲ್ಲಿಂದ ನಾಲ್ಕು ಕಿ.ಮೀ ದೂರದಲ್ಲಿದೆ. 

 ಕೆರೆಯಲ್ಲಿ ಕಂದಕ:ಸೋಮೇಶ್ವರ ದೇವಸ್ಥಾನದಲ್ಲಿ 15 ಎಕರೆಗೂ ಹೆಚ್ಚು ವಿಸ್ತಾರವಾದ ಕೆರೆಯಲ್ಲಿ ಜುಲೈ 13ರಂದು ದೊಡ್ಡದಾದ ಕಂದಕ ಕಾಣಿಸಿಕೊಂಡಿದೆ. ಹೂಳು ತೆಗೆಯುವಾಗ ಜೆಸಿಬಿ ಯಂತ್ರಕ್ಕೆ ಬಂಡೆಯೊಂದು ಸಿಲುಕಿಕೊಂಡಿತ್ತು. ಬಂಡೆ ಒಡೆದಾಗ ಬಾವಿಯಾಕಾರದಲ್ಲಿ ಕಂದಕ ಕುಸಿದು ಬಿದ್ದಿದೆ. 

ಬಾವಿಯಾಕಾರದಲ್ಲಿ ಬಿದ್ದಿರುವ ಗುಂಡಿಯು ಇದು ಪುರಾತನವಾದ ಬಾವಿ, ಗುಹೆ ಅಥವಾ ದೇವಸ್ಥಾನ ಅವಶೇಷ ಇರಬಹುದು ಎಂಬ ಮಾತು ಕೇಳಿ ಬರುತ್ತಿದೆ.

ಐತಿಹಾಸಿಕ ಹಿನ್ನೆಲೆಯುವುಳ್ಳ ಸೋಮೇಶ್ವರ ದೇವಸ್ಥಾನ ಹಾಗೂ ಕೆರೆಯ ಬಗ್ಗೆ ಇನ್ನೂ ಅಧ್ಯಯನ ನಡೆಸುವ ಅಗತ್ಯವಿದೆ.

ಕುಸಿದಿರುವ ಕಂದಕ ಏನಿರಬಹುದು? ಇದು ಉತ್ಖನನ, ಸಂಶೋಧನೆಯಿಂದ ಮಾತ್ರ ತಿಳಿಯಲಿದೆ. ಅಷ್ಟೇ ಅಲ್ಲದೆ ಗ್ರಾಮದಲ್ಲಿ ಪಾಳು ಬಿದ್ದ ಅನೇಕ ಶಿಲಾ ಶಾಸನಗಳಿವೆ. ಪ್ರಾಚೀನ ಜೈನ್ ಬಸದಿ ಇದೆ. ಪ್ರಾಚೀನ ಪುರಾತತ್ವ ಹಾಗೂ ಸಂಶೋಧನೆ ಇಲಾಖೆ ಇತ್ತ ಗಮನ ಹರಿಸಿ ಅಧ್ಯಯನ ನಡೆಸಬೇಕು ಎಂಬುದು ಜನತೆಯ ಆಶಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.