ADVERTISEMENT

ಸ್ತ್ರೀ ಶಕ್ತಿ ಸಬಲವಾಗಲಿ: ನ್ಯಾ. ಆದಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 10:00 IST
Last Updated 7 ಫೆಬ್ರುವರಿ 2011, 10:00 IST

ಗದಗ:ಮಹಿಳೆಯರಿಗೆ ಕಾನೂನಿನಡಿ ದೊರೆಯಬೇಕಾದ ಎಲ್ಲ ಹಕ್ಕುಗಳು ಸಮರ್ಪಕವಾಗಿ ದೊರೆಯಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಸುಭಾಷ ಬಿ. ಆದಿ ಪ್ರತಿಪಾದಿಸಿದರು. ತಾಲ್ಲೂಕಿನ ಕೋಟುಮಚಗಿ ಗ್ರಾಮದ ದುರ್ಗಾದೇವಿ ಸಭಾ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಜ್ಞಾನವಿಕಾಸ ಮಹಿಳಾ ಸದಸ್ಯರಿಗಾಗಿ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆ ನಿಲ್ಲಬೇಕು. ಯುವಕ, ಯುವತಿಯರಲ್ಲಿ ಕಾನೂನಿನ ಅರಿವು ಅಗತ್ಯವಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಸ್ತ್ರೀ ಶಕ್ತಿ, ಮಹಿಳಾ ಸ್ವ ಸಹಾಯ ಸಂಘಗಳು ಬೆಳೆದು ಮಹಿಳೆಯರು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಬೇಕು’ ಎಂದು ಹೇಳಿದರು. ಮಹಿಳೆಯರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಲಹೆಗಾರರಿಂದ ಕಾನೂನಿನ ಅರಿವು ಪಡೆದುಕೊಳ್ಳಬೇಕು ಮತ್ತು ಸಮಸ್ಯೆಗಳನ್ನು ಬಗೆಹರಿಸಿಕೊಂಡು ಪ್ರಾಧಿಕಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ರೋಣದ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ಪಾಲಾಕ್ಷಯ್ಯ ಬಳಿಗೇರಮಠ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಜೆ.ಎನ್. ಹಾವನೂರ, ಉಮೇಶ ಮೂಲಿಮನಿ,  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಲಿಂಗಪ್ಪ ಬಂಗೇರ, ಸುಧಾ ಆದಿ, ಜಾನಕಿ ಹಾವನೂರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.