ADVERTISEMENT

ಸ್ವಚ್ಛತೆ: ಸಿಬ್ಬಂದಿ ತಾರತಮ್ಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 4:55 IST
Last Updated 20 ಅಕ್ಟೋಬರ್ 2012, 4:55 IST
ಸ್ವಚ್ಛತೆ: ಸಿಬ್ಬಂದಿ ತಾರತಮ್ಯ
ಸ್ವಚ್ಛತೆ: ಸಿಬ್ಬಂದಿ ತಾರತಮ್ಯ   

ಮುಂಡರಗಿ: ಪಟ್ಟಣವನ್ನು ಸ್ವಚ್ಛವಾಗಿ ಇಡಬೇಕಾದ ಪುರಸಭೆಯ ಕಾರ್ಮಿಕ ಸಿಬ್ಬಂದಿ ಕೇವಲ ಪುರಸಭೆಯ ಅಧಿಕಾರಿಗಳು ಹಾಗೂ ಪ್ರಭಾವಿ ಜನಪ್ರತಿನಿಧಿಗಳ ಮನೆಯ ಮುಂಭಾಗವನ್ನು ಮಾತ್ರ ಸ್ವಚ್ಛಗೊಳಿ ಸುತ್ತಿದ್ದು, ಪಟ್ಟಣದ ಸಮಗ್ರ ಸ್ವಚ್ಛತೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ಹಾಗೂ ಮತ್ತಿತರರು ಆರೋಪಿಸಿದ್ದಾರೆ.

 ಪಟ್ಟಣದ ಮುಖ್ಯ ಮಾರುಕಟ್ಟೆ ರಸ್ತೆ ಮತ್ತು ಮತ್ತಿತರ ಪ್ರಮುಖ ರಸ್ತೆಗಳನ್ನು ಒಳಗೊಂಡಂತೆ ಪಟ್ಟಣದ ಹೊರವಲಯದಲ್ಲಿರುವ ಕಾಲೊನಿಗಳ ರಸ್ತೆ, ಗಟಾರುಗಳೆಲ್ಲ ಹೊಲಸು ನಾರುತ್ತಿದ್ದು, ಪಟ್ಟಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಲ್ಲಿ ಪುರಸಭೆಯು ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದ್ದಾರೆ.

 ಕಳೆದ ಅ.17ರಂದು ಜರುಗಿದ ಪುರಸಭೆ ಸಾಮಾನ್ಯ ಸಭೆಯಲ್ಲಿ ಹೊಲಸೆದ್ದು ನಾರುತ್ತಿರುವ ಪಟ್ಟಣವನ್ನು ಸ್ವಚ್ಛಗೊಳಿಸುವ ಕುರಿತಂತೆ ಪುರಸಭೆ ಸದಸ್ಯರಾದ ಮೋದಿನಸಾಬ ಡಂಬಳ, ಎಂ.ಜಿ.ವಡ್ಡಟ್ಟಿ, ಅಶೋಕ ಹುಬ್ಬಳ್ಳಿ ಮೊದಲಾದವರು ಪುರಸಭೆಯ ಮುಖ್ಯಾಧಿಕಾರಿ ಹಾಗೂ ಪುರಸಭೆಯ ಅಧ್ಯಕ್ಷೆಯನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡಿದ್ದರು.

ಆದಾಗ್ಯೂ ಎಚ್ಚೆತ್ತುಕೊಳ್ಳದ ಪುರಸಭೆಯು ಪಟ್ಟಣದ ಸಾರ್ವಜನಿಕ ಪ್ರದೇಶಗಳನ್ನು ಸಂಪೂರ್ಣವಾಗಿ ಅಲಕ್ಷಿಸಿ ಕೇವಲ ಪುರಸಭೆ ಸಿಬ್ಬಂದಿ ಹಾಗೂ ಕೆಲವು ಪ್ರಭಾವಿ ಜನಪ್ರತಿನಿಧಿಗಳ ಮನೆಯ ಮುಂದಿರುವ ಗಟಾರು, ರಸ್ತೆಗಳನ್ನು ಮಾತ್ರ ಸ್ವಚ್ಛಮಾಡುವ ಮೂಲ ತಾರತಮ್ಯ ಎಸಗುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

 ಹೊಲಸು ನಾರುತ್ತಿರುವ ಪಟ್ಟಣವನ್ನು ಸ್ವಚ್ಛಗೊಳಿಸದಿರುವ ಕ್ರಮವನ್ನು ಖಂಡಿಸಿ ಪುರಸಭೆ ಪುರಸಭೆ ಸದಸ್ಯೆ ರಿಹಾನಾ ಬೇಗಂ ಕೆಲೂರ ಕಳೆದ ಅ.17ರಂದು ಜರುಗಿಸ ಪುರಸಭೆ ಸಾಮಾನ್ಯ ಸಭೆಯಲ್ಲಿ ಪುರಸಭೆ ಮುಖಾುಧಿಕಾರಿ ಎದುರು ನೆಲದ ಮೇಲೆ ಕುಳಿತು ಪ್ರತಿಭಟನೆ ಕೈಗೊಂಡಿದ್ದರು.
 
ಪಟ್ಟಣವನ್ನು ಸ್ವಚ್ಛಗೊಳಿಸುವುದು ಎಂದರೆ ಕೇವಲ ಪುರಸಭೆ ಅಧಿಕಾರಿಗಳ ಹಾಗೂ ಪ್ರಭಾವಿ ಜನಪ್ರತಿನಿಧಿಗಳ ಮನೆಗಳ ಮುಂಭಾಗವನ್ನು ಮಾತ್ರ ಸ್ವಚ್ಛ ಗೊಳಿಸುವುದು ಎಂದು ಮುಖ್ಯಾಧಿಕಾರಿ ಹಾಗೂ ಅಧಿಕಾರಿಗಳು ಅಪಾರ್ಥ ಮಾಡಿಕೊಂಡಂತಿದೆ ಎಂದು ವ್ಯಂಗ್ಯವಾಡಿದರು.

 ಪಟ್ಟಣದ ಹೊರವಲಯದಲ್ಲಿರುವ ಭೂಮರಡ್ಡಿ ಪ್ಲಾಟ್, ಭೀಮಾಂಬಿಕಾ ಕಾಲನಿ (ಹೆಸರೂರು ಪ್ಲಾಟ್), ಎಸ್.ಎಸ್.ಪಾಟೀಲ ನಗರ, ಕಡ್ಡಿಪೇಟೆ, ಜವಳಿ ಬಜಾರ ಮೊದಲಾದವುಗಳಲ್ಲಿ ವಾಸವಾಗಿರುವ ಜನರು ಪುರಸಭೆಗೆ ನಿತ್ಯ ಶಾಪ ಹಾಕುತ್ತಿದ್ದು, ಅಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.
 
ಭೂಮರಡ್ಡಿ ಪ್ಲಾಟ್‌ನಲ್ಲಿ ವಾಸವಾಗಿರುವ ಪುರಸಭೆ ಅಧಿಕಾರಿ ಹಿರೇಮಠ ಅವರ ಮನೆಯ ಮುಂಭಾಗವನ್ನು ಮಾತ್ರ ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪಡಿಸುವ ಕಾರ್ಮಿಕರು ಹಿರೇಮಠ ಅವರ ಮನೆಯ ಅಕ್ಕಪಕ್ಕದ ಮನೆಗಳತ್ತ ಕಣ್ಣೆತ್ತಿಯೂ ನೋಡುವುದಿಲ್ಲ ಎಂದು ಆರೋಪಿಸಿದರು. 

 ಪಟ್ಟಣದ ಅಭಿವೃದ್ಧಿ ಹಾಗೂ ಮತ್ತಿರರ ಕಾರ್ಯಗಳಿಗೆ ಸಾರ್ವಜನಿಕರಿಂದ ನಿಯಮಿತವಾಗಿ ತೆರಿಗೆ ಕಟ್ಟಿಸಿಕೊಳ್ಳುವ ಪುರಸಭೆಯ ಅಧಿಕಾರಿಗಳು ಸ್ವಚ್ಛತೆಯ ವಿಷಯ ಬಂದಾಗ ಪಕ್ಷಪಾತಿಗಳಾಗುವುದು ಯಾವ ನ್ಯಾಯ? ಎಂದು ಖಾರವಾಗಿ ಪ್ರಶ್ನಿಸಿದರು. ಸ್ವಚ್ಚಗೊಳಿಸುವಂತಿದ್ದರೆ ಇಡೀ ಪಟ್ಟಣವನ್ನು ತಾರತಮ್ಯವಿಲ್ಲದೆ ಸ್ವಚ್ಛಗೊಳಿಸಬೇಕು. ಬೇಕಾದವರ ಮನೆಗಳ ಮುಂಭಾಗ ಸ್ವಚ್ಛ ಗೊಳಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.