ADVERTISEMENT

ಹಳೆಸಿಂಗಟಾಲೂರಗೆ ಶಾಸಕರ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 5:44 IST
Last Updated 5 ಆಗಸ್ಟ್ 2013, 5:44 IST

ಮುಂಡರಗಿ: ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ಜಲಾವೃತಗೊಂಡಿರುವ ತಾಲ್ಲೂಕಿನ ಹಳೆಸಿಂಗಟಾಲೂರ ಗ್ರಾಮಕ್ಕೆ ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ಮತ್ತಿತರ ಅಧಿಕಾರಿಗಳು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

ಪ್ರತಿ ವರ್ಷ ತುಂಗಭದ್ರಾ ನದಿಗೆ ಪ್ರವಾಹ ಬಂದಾಗಲೆಲ್ಲ ಹಳೆಸಿಂಗಟಾಲೂರ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದು, ತಮಗೆ ಹೊಸ ಸಿಂಗಟಾಲೂರಿನಲ್ಲಿ ನಿವೇಶನ ನೀಡಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿಕೊಂಡರು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ನೂತನ ಸರ್ಕಾರ ಬಡ ಜನತೆಗೆ ವಿವಿಧ ಯೋಜನೆಗಳ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಉದ್ದೇಶಿಸಿದ್ದು, ರಾಜೀವಗಾಂಧಿ ಹೌಸಿಂಗ್ ಸೊಸೈಟಿ ಅಥವಾ ಬೇರೆ ಯಾವುದಾದರೂ ಯೋಜನೆಯಲ್ಲಿ ಹಳೆಸಿಂಗಟಾಲೂರ ಗ್ರಾಮದಲ್ಲಿ ವಾಸಿಸುತ್ತಿರುವ ಎಲ್ಲ ಕುಟುಂಬಗಳಿಗೂ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.  ನದಿಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣದಲ್ಲಿ ಇಳಿಕೆಯಾಗದಿದ್ದಲ್ಲಿ ಹತ್ತಿರದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರಿಗೆ ತಾತ್ಕಾಲಿಕವಾಗಿ ಗಂಜಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಸಾಮಾನು ಸರಂಜಾಮುಗಳನ್ನು ಸಾಗಿಸಲು ಗ್ರಾಮಸ್ಥರಿಗೆ ವಾಹನದ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಅವರು ತಿಳಿಸಿದರು.

ತಹಶೀಲ್ದಾರ್ ಎಸ್.ಆರ್.ಸಿರಕೋಳ, ಕಂದಾಯ ನಿರೀಕ್ಷಕ ಆರ್.ಜಿ.ಬಾಲೇಹೊಸೂರ, ಎಸ್.ಎಸ್.ನಿಟ್ಟಾಲಿ, ಗ್ರಾಮ ಲೆಕ್ಕಾಧಿಕಾರಿ ಜಿ.ಡಿ.ಹವಳೆ, ಜೆ.ಬಿ.ಅಮಾತೆ, ಬಸವರಾಜ ಕೋರ್ಗಲ್, ಸಿಂಗಟಾಲೂರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಉಮಾ ಶಿರಹಟ್ಟಿ, ಸದಸ್ಯರಾದ ವೀರಣ್ಣ ಮುಂಡವಾಡ, ಫಕ್ಕಿರಡ್ಡಿ ನೀರಲಗಿ, ಡಾ,ಬಿ.ಎಸ್.ಮೇಟಿ, ಈರಮ್ಮ ಮಲ್ಲಿಕೇರಿ, ದಂಡೆಪ್ಪ ಹರಿಜನ, ಈರಪ್ಪ ಡಂಬಳ, ಬಸವರೆಡ್ಡಿ ಸಂಗನಾಳ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.