ADVERTISEMENT

‘ಭವ್ಯ ಭಾರತ ನಿರ್ಮಾಣಕ್ಕೆ ಆದ್ಯತೆ ನೀಡಿ’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 5:53 IST
Last Updated 13 ಡಿಸೆಂಬರ್ 2013, 5:53 IST

ಗಜೇಂದ್ರಗಡ: ‘ಭವ್ಯ ಭಾರತದ ನಿರ್ಮಾಣಕ್ಕೆ ಗ್ರಾಮೋದ್ಧಾರವೇ ಅಡಿ ಪಾಯ ಎಂದು ವಿವೇಕಾನಂದ ಗೆಳೆಯರ ಬಳಗದ ಅಧ್ಯಕ್ಷ ಸಂಗನಗೌಡ ಮಾಲಿಪಾಟೀಲ ಅಭಿಪ್ರಾಯಪಟ್ಟರು. ಇಲ್ಲಿಗೆ ಸಮೀಪದ ಇಟಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಮನೆ–ಮನೆಗೆ ಸ್ವಾಮಿ ವಿವೇಕಾನಂದ ಅಭಿಯಾನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕತೆ ಅಬ್ಬರಕ್ಕೆ ಸಿಲುಕಿ ಗ್ರಾಮೀಣ ಪರಂಪರೆ ನಾಶವಾಗುತ್ತದೆ. ಕುಲಕಸುಬುಗಳು ಮೂಲೆಗುಂಪಾಗಿವೆ. ರಾಸಾಯನಿಕ ಔಷಧಿಗಳು ನಮ್ಮ ನೆಲದ ಫಲವತ್ತತೆ ಹಾಳು ಮಾಡಿವೆ ಎಂದರು.

ವೀವೇಕಾನಂದ ಕಾವಿಯನ್ನುಟ್ಟು ತಾಯ್ನಾಡಿನ ಮೇಲಿನ ಅಪಾರ ಪ್ರೇಮದಿಂದ ಈ ದೇಶದ ಉದ್ಧಗಲಕ್ಕೂ ಕಾಲ್ನಡಿಗೆಯಲ್ಲಿ ಸಂಚರಿಸಿ ಹೃದಯದ ಮಿಡಿತವನ್ನು ಅರಿತರು. 1892 ಡಿಸೆಂಬರ್‌ನಲ್ಲಿ ಕನ್ಯಾಕುಮಾರಿಯ ಸಮುದ್ರದ ನಡುವಿನ ಶಿಲೆಯ ಮೇಲೆ ಸಾಕ್ಷಾತ್‌ ಶಿವನಂತೆ ಸಮಾಧಿಯಲ್ಲಿ ಕುಳಿತರು. ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಕಾಷಾಯ ವಸ್ತ್ರ ಧರಿಸಿ, ತಲೆಗೆ ಕೇಸರಿ ಪೇಟ ಸುತ್ತಿ, ಧೀರ–ಗಂಭೀರ ವಾಣಿಯಿಂದ ಭಾರತದ ಹಿರಿಮೆಯನ್ನು ಸಾರಿದರು ಎಂದರು.

ಆಧುನಿಕ ಅರ್ಥ ವ್ಯವಸ್ಥೆಗಳು ಪ್ರಪಂಚವನ್ನೆಲ್ಲ ಪ್ರಭಾವಿಸುವುದಕ್ಕೂ ಪೂರ್ವದಲ್ಲಿಯೇ ಭಾರತದಲ್ಲಿ ಅರಳಿದ ‘ವಿಶ್ವವೇ ಒಂದು ಗ್ರಾಮ’ ಎಂಬ ಕಲ್ಪನೆಯನ್ನು ಆಧುನಿಕ ಜಗತ್ತಿಗೆ ಪರಿಚಯಿಸಿದವರು ಸ್ವಾಮಿ ವಿವೇಕಾ ನಂದರು. 1897 ರ ಮೇ ನಲ್ಲಿ ರಾಮ ಕೃಷ್ಣ ಮಠವನ್ನು ಸ್ಥಾಪಿಸಿ  ಜನ ಸೇವೆಗಾಗಿ ಜೀವನವನ್ನೇ ಸಮರ್ಪಿಸಿದರು.    1902 ಜುಲೈ 4 ರಂದು ಕಲ್ಕತ್ತಾದ ಬೇಲೂರು ಮಠದಲ್ಲಿ ಸಮಾಧಿಸ್ಥರಾದ ಸ್ವಾಮಿ ವಿವೇಕಾನಂದರು ಕೇವಲ 39 ವರ್ಷಗಳ ಕಾಲ ಜೀವಿಸಿದ್ದರು ಎಂದರು.

ಮುಖಂಡರಾದ ಉಮೇಶ ಮಲ್ಲಾ ಪುರ, ಬಸವರಾಜ ಸಜ್ಜನರ,     ಶರ ಣಯ್ಯ ಹಿರೇಮಠ, ಬಸವರಾಜ ಪಮ್ಮಾರ, ಹನಮಂತಪ್ಪ ಹೊಸಳ್ಳಿ, ಅಶೋಕ ಕಟ್ಟಿಮನಿ, ಮಂಜುನಾಥ, ಮುತ್ತಪ್ಪ ಹಿರೇಹಾಳ ಉಪಸ್ಥಿತರಿದ್ದರು.

ಕಾರ್ತಿಕೋತ್ಸವ
ಗದಗ:
ಅವಳಿ ನಗರದ ಗ್ರಾಮ ದೇವತೆ ಗಂಗಾಪೂರಪೇಟೆಯ  ದುರ್ಗಾ ದೇವಿಯ ಮಹಾಕಾರ್ತಿಕೋತ್ಸವವು ಇದೇ 13 ರಂದು ವೈಕುಂಠ ಏಕಾದಶಿ ದಿವಸ ಸಂಜೆ 7 ಗಂಟೆಗೆ ನಡೆಯಲಿದೆ ಎಂದು ವಿ.ಎ.ಪಟೇಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.