ಗದಗ: ಹಿಂದಿನ ಮತ್ತು ಇಂದಿನ ಮಕ್ಕಳ ಮಾನಸಿಕ ಸ್ಥಿತಿಯಲ್ಲಿ ಸಾಕಷ್ಟು ವ್ಯತ್ಯಾಸ ಕಾಣುತ್ತಿದ್ದೇವೆ. ಮಕ್ಕಳ ವರ್ತನೆಯಲ್ಲಿನ ಬದಲಾವಣೆ ಕುರಿತು ಅಧ್ಯಯನ ನಡೆಸುವ ಅಗತ್ಯತೆ ಇದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ನಗರದಲ್ಲಿ ಶುಕ್ರವಾರ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘ, ಪ್ರೌಢ ಶಾಲಾ ಮಂಡಳಿ ಸಹಯೋಗದಲ್ಲಿ ಪ್ರೌಢಶಾಲಾ ಶಿಕ್ಷಕರ ಜಿಲ್ಲಾ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಮಕ್ಕಳು ಮನಸ್ಸು ತುಂಬ ಸೂಕ್ಷ್ಮವಾಗಿದೆ. ಅವರನ್ನು ಬೆದರಿಸುವುದು, ಹೊಡೆಯುವುದು ಹಾಗೂ ಗದರಿಸುವಂತಿಲ್ಲ. ಕೇವಲ ಟಿ.ವಿ. ಚಾನಲ್ ಬದಲಿಸುವ ವಿಷಯಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರಿನ ಶ್ರೀಮಂತ ಸಮುದಾಯದ ಮಕ್ಕಳ ಮನಸ್ಸು ಮೃದುವಾಗಿದೆ. ಯಾಕೆ ಈ ರೀತಿ? ಸಮಾಜಕ್ಕೆ ಇದು ಸವಾಲು. ಲಕ್ಷಾಂತರ ರೂಪಾಯಿ ಡೊನೇಷನ್ ನೀಡಿ ಮಕ್ಕಳನ್ನು ಕಾನ್ವೆಂಟ್‌ಗೆ ಸೇರಿಸುತ್ತೇವೆ. ಮಕ್ಕಳ ಮನಸ್ಸು ಗಟ್ಟಿಗೊಳಿಸಲುವಲ್ಲಿ ಎಡುವುತ್ತಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊಸ ಪದ್ಧತಿ ಜಾರಿಗೊಳಿಸಿದರೆ ಬದಲಾವಣೆ ಬೇಕು ಎನ್ನುತ್ತೇವೆ. ಅಣ್ಣಿಗೇರಿ ಗುರು ಅಂತಹವರು ಶಿಕ್ಷಕರಿಗೆ ಮಾದರಿ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ಬದಲಾವಣೆ, ಶಿಕ್ಷಕರಿಗೆ ತರಬೇತಿ ಮತ್ತು ಉತ್ತಮ ಶಿಕ್ಷಣ ಕುರಿತು ಶೈಕ್ಷಣಿಕ ಸಮಾವೇಶದಲ್ಲಿ ಚರ್ಚಿಸಿ ಮಾರ್ಗದರ್ಶನ ನೀಡಬೇಕು ಎಂದು ಅವರು ನುಡಿದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಮಾರಕವಾಗುವಂತಹ ಕಾಯಿದೆಗಳನ್ನು ಸರ್ಕಾರ ಜಾರಿಗೆ ತರುತ್ತಿದೆ. ಅದರ ವಿರುದ್ಧ ಹೋರಾಟ ಮಾಡಲು ಎಲ್ಲರೂ ಸಂಘಟಿತರಾಗಬೇಕು. ರಾಜ್ಯ ಸರ್ಕಾರದ ಮೇಲೆ ರೂ. 1.58 ಲಕ್ಷ ಕೋಟಿ ಸಾಲ ಇದೆ. ಪ್ರತಿಯೊಬ್ಬರ ಮೇಲೆ ರೂ.27 ಸಾವಿರ ಸಾಲ ಇದೆ. ಒಂದು ರೂಪಾಯಿಗೆ ಕೆ.ಜಿ. ಅಕ್ಕಿ ನೀಡಿದರೆ ರಾಜ್ಯದ ಪ್ರಗತಿ ಹೇಗೆ ಸಾಧ್ಯ. ಶಿಕ್ಷಕರಿಗೆ ಕೊಡಬೇಕಾದ ಬಾಕಿ ಅನುದಾನ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಮಸ್ಯೆಗಳು ಹಾಗೂ ಸವಾಲುಗಳು ಕುರಿತು ಶಿಕ್ಷಣ ತಜ್ಞ ಡಾ.ಕೆ.ಪಿ.ಪುತ್ತೂರಾಯ ಮಾತನಾಡಿ, ಮಕ್ಕಳ ಆಸಕ್ತಿ ಇರುವ ಕ್ಷೇತ್ರವನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುತ್ತದೆ. ಮಕ್ಕಳಲ್ಲಿ ರಾಷ್ಟ್ರಪ್ರೇಮ ಹುಟ್ಟಿಸಬೇಕು ಮತ್ತು ನೀತಿ ಪಾಠ ಹೇಳಬೇಕು. ಪ್ರತಿ ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸಬೇಕು ಮತ್ತು ಆದರ್ಶ ವ್ಯಕ್ತಿಯಾಗಿರಬೇಕು ಎಂದು ಸಲಹೆ ನೀಡಿದರು.
ಡಾ.ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ವಿ.ರಾಜೇಂದ್ರ ಪ್ರಸಾದ, ಡಾ.ಬಸವರಾಜ ಧಾರವಾಡ, ನಿವೃತ್ತ ಪ್ರಾಧ್ಯಾಪಕ ಎಸ್.ಟಿ.ಬ್ಯಾಕೋಡ ಹಾಜರಿದ್ದರು. ಜಿಲ್ಲಾ ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘ ಅಧ್ಯಕ್ಷ ಡಿ.ಬಿ.ಹುಯಿಲಗೋಳ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಮಾಧ್ಯಮಿಕ ಹಾಗೂ ಪ್ರೌಢಶಾಲಾ ಮಂಡಳಿಗಳ ಸಂಘದ ಸಂಸ್ಥಪಾಕರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.