ಗದಗ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲಿ ಏ. 27ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವು ದಾಗಿ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಮಹಾ ಪ್ರಧಾನ ಕಾರ್ಯದರ್ಶಿ ಅನಂತ ಸುಬ್ಬರಾವ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸರ್ಕಾರಕ್ಕೆ ಬೇಡಿಕೆ ಈಡೇರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಸರ್ಕಾರ ಮಾತುಕತೆಗೆ ಮುಂದಾಗಿಲ್ಲ. ಇದನ್ನು ಖಂಡಿಸಿ 27ರಿಂದ ರಾಜ್ಯಾದ್ಯಂತ ಒಂದು ಲಕ್ಷ ಹತ್ತು ಸಾವಿರ ಕಾರ್ಮಿಕರು ಮುಷ್ಕರ ನಡೆಸಲಿದ್ದಾರೆ ಎಂದರು.
ಕಾರ್ಮಿಕರ ನಿರಂತರ ಶೋಷಣೆ ನಿಲ್ಲಬೇಕು, ಕಾರ್ಮಿಕರ ಮೇಲೆ ಸುಳ್ಳು ದಾಖಲೆ ಸೃಷ್ಟಿಸಿ ಹೂಡಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು, ಕಾರ್ಮಿಕರ ಅಕ್ರಮ ವರ್ಗಾವಣೆ ರದ್ದುಗೊಳಿಸಬೇಕು ಹಾಗೂ ಸಂಸ್ಥೆಯಲ್ಲಿನ ನಿವೃತ್ತ ನೌಕರರಿಗೆ ಕೊಡುವ ಬಾಕಿ ಹಣ ಸೇರಿದಂತೆ ನಷ್ಟದಲ್ಲಿರುವ ಸಂಸ್ಥೆಯನ್ನು ಪುನಶ್ಚೇತನ ಗೊಳಿಸಲು ಸರ್ಕಾರ ರೂ. 300 ಕೋಟಿ ಸಹಾಯ ಧನ ನೀಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ವೇತನ ತಾರತಮ್ಯ ಸರಿಪಡಿಸಬೇಕು, ಮಹಿಳಾ ಕಾರ್ಮಿಕರಿಗೆ ವಿಶ್ರಾಂತಿ ಗೃಹ, ಮೂಲ ಸೌಕರ್ಯ, ಡಬಲ್ ಡ್ಯೂಟಿ ಹಾಗೂ ರಜೆ ಕಿರಿಕಿರಿ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ವಿವಿಧ ಸಂಘ ಸಂಸ್ಥೆಗಳ ಜತೆ ಮಾತುಕತೆ ನಡೆಸಿರುವ ಸರ್ಕಾರ, ಸಂಸ್ಥೆಯ ಕಾರ್ಮಿಕರ ಸಮಸ್ಯೆ ಆಲಿಸಲು ಮುಂದೆ ಬರುತ್ತಿಲ್ಲ. ನಿಗದಿತ ಸಮಯ ದೊಳಗೆ ಬೇಡಿಕೆ ಈಡೇರಿಸಲು ಮುಂದಾಗದಿದ್ದರೆ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸ ಲಾಗುವುದು ಎಂದು ಎಚ್ಚರಿಸಿದರು.
ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳದ ಗೌರವಧ್ಯಕ್ಷ ವೆಂಕಟೇಶ ದಾಸರ, ಪ್ರಧಾನ ಕಾರ್ಯದರ್ಶಿ ಎಸ್.ಎ.ಅಯ್ಯನಗೌಡರ ಹಾಗೂ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.