ADVERTISEMENT

ಕಡಲೆ ಖರೀದಿ ಕೇಂದ್ರ ಆರಂಭಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 9:18 IST
Last Updated 6 ಜನವರಿ 2018, 9:18 IST

ರೋಣ: ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಹೊಳೆಮಣ್ಣೂರು ಗ್ರಾಮದ ವ್ಯಕ್ತಿಯೊಬ್ಬರಿಗೆ ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳು ಸೂಕ್ತವಾಗಿ ಸ್ಪಂದಿಸದೇ ‘ನಿಮಗೆ ಕುಷ್ಟರೋಗವಿದೆ’ ಎಂದು ಸುಳ್ಳು ಹೇಳಿರುವ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರೇಮವ್ವ ನಾಯಕ ತರಾಟೆಗೆ ತೆಗೆದುಕೊಂಡರು.

ಶುಕ್ರವಾರ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶಿಲನಾ ಸಭೆಯಲ್ಲಿ ಅವರು ಮಾತನಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆ ಅಧಿಕಾರಿ ಡಾ.ಅರವಿಂದ ಕಂಬಳಿ ಈ ಕುರಿತು ಯಾವುದೇ ಮಾಹಿತಿ ಇಲ್ಲ. ಈ ವಿಷಯವಾಗಿ ನಮ್ಮ ಸಿಬ್ಬಂದಿಯನ್ನು ವಿಚಾರಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಶಾಲಾ ವೇಳೆಯಲ್ಲಿ ಅಪಘಾತಕ್ಕೆ ಈಡಾದ ವಿದ್ಯಾರ್ಥಿಗಳಿಗೆ ಪರಿಹಾರ ಒದಗಿಸುವ ಕುರಿತು ಉಪಾಧ್ಯಕ್ಷೆ ಇಂದಿರಾ ತೇಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ನಂಜುಂಡಯ್ಯ ಅವರಿಂದ ಮಾಹಿತಿ ಪಡೆದರು.

ADVERTISEMENT

ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎ.ತರಫದಾರ್ ಮಾತನಾಡಿ, ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ‘ಮಾತೃ ವಂದನಾ’ ಯೋಜನೆಯು ಕುರಿತು ಜನ ಜಾಗೃತಿ ಮೂಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನಾಗನಗೌಡ ಪಾಟೀಲ ಅವರಿಗೆ ಸೂಚಿಸಿದರು. ಕಡಲೆ ಖರೀದಿಗೆ ಬೆಂಬಲ ಬೆಲೆ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಶಿವಲಿಂಗ ಪ್ರಭುವಾಲಿ ಅವರಿಗೆ ತರಫದಾರ್ ತಿಳಿಸಿದರು.

ತಾಲ್ಲೂಕ ಪಂಚಾಯ್ತಿ ಕಾರ್ಯನಿರ್ವಾಹಕಾಧಿಕಾರಿ ಎಂ.ವಿ.ಚಳಗೇರಿ ಮಾತನಾಡಿ, ತೆರದ ಕೊಳವೆಬಾವಿಗಳನ್ನು ಮೂರು ದಿನಗಳ ಒಳಗೆ ಮುಚ್ಚುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಆದೇಶಿಸಿದ್ದು ತಾಲ್ಲೂಕಿನಲ್ಲಿ ಇರುವ ತೆರದ ಕೊಳವೆಬಾವಿಗಳನ್ನು ಮುಚ್ಚಿಸಲು ಸ್ಥಳೀಯ ಆಡಳಿತ ಘಟಕಗಳು ಕ್ರಮ ಕೈಗೊಳಗಳ್ಳಬೇಕು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಉಪಾಧ್ಯಕ್ಷೆ ಇಂದಿರಾ ತೇಲಿ ಮಾತನಾಡಿ, ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಕುರಿತು ಏನು ಕ್ರಮ ಕೈಗೊಂಡಿದ್ದಿರಿ ಎಂದು ತಹಶೀಲ್ದಾರ್ ಶಿವಲಿಂಗ ಪ್ರಭುವಾಲಿ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಈ ಕುರಿತು ಯಾವುದೇ ಮಾಹಿತಿ ಇಲ್ಲ. ಭ್ರಷ್ಟ ಸಿಬ್ಬಂದಿ ಯಾರು ಎಂಬ ಮಾಹಿತಿ ಲಭಿಸಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು. ತಾಲ್ಲೂಕು ಪಂಚಾಯ್ತಿ ಯೋಜನಾ ಅಧಿಕಾರಿ ಬಿ.ಆರ್. ಬೇವಿನಮರದ, ತಾಲ್ಲೂಕುಮಟ್ಟದ ವಿವಿರಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.