ADVERTISEMENT

ಶಿಕ್ಷಕರ ಕೊರತೆ: ಶಾಲೆಗೆ ಗ್ರಾಮಸ್ಥರಿಂದ ಬೀಗ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 10:08 IST
Last Updated 27 ಜನವರಿ 2018, 10:08 IST

ನರೇಗಲ್: ಇಲ್ಲಿಗೆ ಸಮೀಪದ ಅಬ್ಬಿಗೇರಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ಕೊರತೆ ಹಾಗೂ ಪದೆ ಪದೇ ನಿಯೋಜನೆ ಮೇರೆಗೆ ಬೇರೆ ಶಾಲೆಗಳಿಗೆ ವರ್ಗಾಯಿಸುವುದನ್ನು ಖಂಡಿಸಿ ಬುಧವಾರ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಮುತ್ತಿಗೆ ಹಾಕಿದರು.

ಗ್ರಾಮಸ್ಥ ಬಾಬುಗೌಡ ಪಾಟೀಲ ಮಾತನಾಡಿ, ಅಬ್ಬಿಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 187ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸಮರ್ಪಕ ಶಿಕ್ಷಕರಿಲ್ಲ. ಇರುವ ಶಿಕ್ಷಕರನ್ನು ನಿಯೋಜನೆ ಮೇಲೆ ಪದೆ ಪದೇ ವರ್ಗಾಯಿಸಲಾಗುತ್ತಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದರು.

ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಸಮಸ್ಯೆಯನ್ನು ಬಗೆಹರಿಸಲು ಇಲಾಖೆಯ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಗ್ರಾಮ ಪಂಚಾಯ್ತಿ ಸದಸ್ಯ ಸುರೇಶ ನಾಯ್ಕರ ಮಾತನಾಡಿ, ಈ ಹಿಂದೆ ಸಾಕಷ್ಟು ಬಾರಿ ಈ ಬಗ್ಗೆ ಗಮನ ಸೆಳೆದರೂ ಸಹ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮಸ್ಯೆ ಪರಿಹರಿಸುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವವರೆಗೆ ಬೀಗ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಬಂದ ಶಿಕ್ಷಣ ಸಂಯೋಜಕ ಎಸ್.ಎಸ್. ಪಾಗದ ಹಾಗೂ ಸಂಪನ್ಮೂಲ ವ್ಯಕ್ತಿ ಎನ್.ವಿ. ಹಿರೇಮಠ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದರು. ನಿಯೋಜನೆಗೊಂಡಿದ್ದ ಶಿಕ್ಷಕಿ ವಿ.ಆರ್. ಜಂಗಮನಿ ಅವರ ವರ್ಗಾವಣೆ ರದ್ದುಪಡಿಸಿದ್ದರಿಂದ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಹಿರೇಮನಿ, ಸದಸ್ಯ ಮಹಾದೇವಪ್ಪ ಕಂಬಳಿ, ಶರಣಪ್ಪ ಗುಜಮಾಗಡಿ ಬಸವರಾಜ ತಳವಾರ, ಭೀಮಷಿ ಮಲ್ಲಾಪೂರ, ಅಪ್ಪಣ್ಣ ಪಾಟೀಲ, ಆನಂದ ಕುರಿ, ಅಪ್ಪಣ್ಣ ಗುಜಮಾಗಡಿ, ದುಂಡಪ್ಪ ಬಾಸಲಾಪೂರ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.