ADVERTISEMENT

ಜಾತ್ಯತೀತ ನಿಲುವಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 10:02 IST
Last Updated 29 ಜನವರಿ 2018, 10:02 IST
ನಿಜಗುಣಪ್ರಭು ಸ್ವಾಮಿಗಳು
ನಿಜಗುಣಪ್ರಭು ಸ್ವಾಮಿಗಳು   

ಗಜೇಂದ್ರಗಡ: ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಾಥಮಿಕ ಸಭೆಯು ಈಗ ಆರಂಭವಾಗಿದ್ದು ಈ ಸಂಸ್ಥೆಯನ್ನು ಕಟ್ಟಿರುವ ಉದ್ದೇಶ ಜಾತ್ಯತೀತ ಧರ್ಮಗಳ ನಿಲುವಿನಲ್ಲಿ, ಬಸವ ತತ್ವವನ್ನು ಬೆಳೆಸುವುದು ಎಂದು ಬೈಲೂರ ನಿಷ್ಕಲ ಮಂಟಪದ ಮತ್ತು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.

ಕಲಬುರ್ಗಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ಜನರು ಹಾಗೂ ಕೆಲವು ಸ್ವಾಮೀಜಿಗಳು ಇದು ಎಂದಿಗೂ ಗುರಿಯನ್ನು ತಲುಪಲಾರದು ಎಂದು ಈ ಸಂಸ್ಥೆಯ ಬಗ್ಗೆ ಅಪಸ್ವರಗಳನ್ನು ಎತ್ತಿದ್ದಾರೆ. ಆದರೆ 12ನೆಯ ಶತಮಾನದಿಂದಲೂ ಬಸವಾದಿ ಶರಣರ ತತ್ವ ಸಿದ್ಧಾಂತಗಳು ಹರಿದು ಬಂದಿವೆ. ಇದನ್ನು ಯಾವುದೇ ರೀತಿಯಲ್ಲಿ ಬದಲಾಯಿಸಲು ಸಾಧ್ಯವಿಲ್ಲ ಎಂದರು.

ಜಾಗತಿಕ ಲಿಂಗಾಯತ ಸಂಸ್ಥೆಯು ಯಾವುದೇ ಧರ್ಮವನ್ನು ಒಡೆಯುವ ಸಂಸ್ಥೆಯಲ್ಲ. ಇರುವ ಧರ್ಮ ಒಂದೇ, ಅದು ಲಿಂಗಾಯತ ಧರ್ಮ. ಆ ಧರ್ಮದ ಮಾನ್ಯತೆ ಮತ್ತು ಪುನರುತ್ಥಾನದ ಪ್ರಸಾರಕ್ಕಾಗಿ ಇದನ್ನು ಹುಟ್ಟು ಹಾಕಲಾಗಿದೆ. ಇದರಲ್ಲಿ ಪರ, ವಿರೋಧ ವ್ಯವಸ್ಥೆಗಳು ನುಸುಳುವ ಸಾಧ್ಯತೆಯೇ ಇಲ್ಲ ಎಂದು ಸ್ವಾಮೀಜಿ ವಿಶ್ಲೇಷಿಸಿದರು. ಜಾಗತಿಕ ಲಿಂಗಾಯತ ಮಹಾಸಭೆಯು ಬಸವ ತತ್ವದ ಮೇಲೆ ನಿಂತಿದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ ಎಂದರು.

ADVERTISEMENT

ಇದೊಂದು ಪ್ರಾತಿನಿಧಿಕ ಲಿಂಗಾಯತ ಧರ್ಮ ಸಂಸ್ಥೆಯಾಗಿದೆ. ಲಿಂಗಾಯತರು ನಾವೆಲ್ಲಾ ಒಂದು, ಈ ಬಗ್ಗೆ ಕೆಲವು ಸ್ವಾಮಿಗಳು ಭಿನ್ನ ವಿಚಾರವನ್ನು ಹೊಂದಿದ್ದಾರೆ ಎಂಬುದು ಕೇವಲ ಭ್ರಮೆ. ನಾವು ರಾಜಕೀಯದಿಂದ ದೂರವಿದ್ದೇವೆ. ಆದರೆ ರಾಜಕಾರಣಿಗಳ ಜೊತೆ ಸಂಬಂಧವನ್ನು ಇರಿಸಿಕೊಂಡಿದ್ದೇವೆ ಹೊರತು ನಮ್ಮಲ್ಲಿ ರಾಜಕೀಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ರವಿ ಹೊನವಾಡ, ಬಸವರಾಜ ಕೊಟಗಿ, ಬಸವರಾಜ ಹೊಳಿ, ಸಾಗರ ವಾಲಿ, ಸಂತೋಷ ಕತ್ತಿಶೆಟ್ಟರ, ಮಂಜು ಹರಿಹರ, ಮಂಜು ಹೂಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.