ADVERTISEMENT

ಜೈನ ಧರ್ಮ ಮಾನವೀಯ ಮೌಲ್ಯಗಳ ಆಗರ: ತೋಂಟದ ಶ್ರೀ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 10:05 IST
Last Updated 9 ಫೆಬ್ರುವರಿ 2018, 10:05 IST

ಗದಗ: ‘ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಜೈನ ಕವಿಗಳ ಕೊಡುಗೆ ಮಹತ್ವದ್ದು. ಜೈನ ಧರ್ಮವು ಮಾನವೀಯ ಮೌಲ್ಯಗಳ ಆಗರ’ ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಲಕ್ಕುಂಡಿಯಲ್ಲಿ ಅತ್ತಿಮಬ್ಬೆ ಅಜಿತನಾಥ ಪುರಾಣದ ಸಾವಿರ ಹಸ್ತಪ್ರತಿಗಳನ್ನು ತಯಾರಿಸಿ, ವಿತರಿಸಿದ ಹಿನ್ನೆಲೆಯಲ್ಲಿ ದಾನದ ಮಹತ್ವ ಅಡಗಿದೆ. ಅನ್ನದಾನ, ಶಾಸ್ತ್ರದಾನ, ವಿದ್ಯಾದಾನಗಳ ಮಹತ್ವವನ್ನು ಜೈನ ಧರ್ಮ ಸಾರುತ್ತದೆ’ ಎಂದರು.

ಜೈನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳ ಕುರಿತು ಅಥಣಿಯ ಕನ್ನಡ ಉಪನ್ಯಾಸಕ ಡಾ.ಪಿ.ಜಿ.ಕೆಂಪಣ್ಣವರ ಉಪನ್ಯಾಸ ನೀಡಿ ‘ಅರ್ಥ, ಕಾಮವನ್ನು ಧರ್ಮದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಂಡು ನಡೆಯುವ ವ್ಯಕ್ತಿ ಶ್ರೇಷ್ಠತೆಯನ್ನು ಸಾಧಿಸುತ್ತಾನೆ. ಇಂದ್ರಿಯ ನಿಗ್ರಹ ಮುಖ್ಯವಾಗಿವೆ. ಪ್ರೀತಿ, ದಯೆ ಗುಣಗಳನ್ನು ಜೈನ ಧರ್ಮ ಬೋಧಿಸುತ್ತದೆ. ದಯೆಯೇ ಜೈನ ಧರ್ಮದ ಮೂಲ ತಿರುಳಾಗಿದೆ’ ಎಂದರು.

ADVERTISEMENT

‘ಶರಣರ ಚಿಂತನೆ ಮತ್ತು ಜೈನ ಧರ್ಮದ ವಿಚಾರಗಳಲ್ಲಿ ಸಾಮ್ಯತೆ ಕಾಣಬಹುದಾಗಿದೆ. ಶರಣರು ದಯೆಯೇ ಧರ್ಮವೆಂದು ಸಾರಿದ್ದಾರೆ. ಬಸವಣ್ಣನವರು ಪ್ರತಿಪಾದಿಸಿದ ಲಿಂಗಾಯತ ಧರ್ಮ ಅನೇಕ ಅಸಮಾನತೆಗಳನ್ನು ತೊಡೆದುಹಾಕಿ, ಸರಳವಾಗಿ, ಸುಲಭವಾಗಿ ವ್ಯಕ್ತಿ ಉನ್ನತಿಯನ್ನು ಸಾಧಿಸುವ ಮಾರ್ಗವನ್ನು ತೋರಿಸುತ್ತದೆ’ ಎಂದು ಎ.ಎಂ.ಗೌಡರ ಅಭಿಪ್ರಾಯಪಟ್ಟರು.

ಲೇಖಕ ಎಚ್.ಚಂದ್ರಶೇಖರ ಮಾತನಾಡಿದರು. ಶ್ರವಣಬೆಳಗೊಳದಲ್ಲಿ ನಡೆಯಲಿರುವ ಬಾಹುಬಲಿ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ದಿಗಂಬರ ಜೈನ ಸಮಾಜದ ಕಾರ್ಯದರ್ಶಿ ಯಶವಂತ ಸಿದ್ದಣ್ಣವರ ಸ್ವರಚಿತ ಕವನ ವಾಚನ ಮಾಡಿದರು.

ವಿರೂಪಾಕ್ಷಪ್ಪ ಬಳ್ಳೊಳ್ಳಿ, ದಾನಯ್ಯ ಗಣಾಚಾರಿ, ಅಕ್ಕಮಹಾದೇವಿ ಚೆಟ್ಟಿ, ಚೇತನ ಅಂಗಡಿ, ಸಿದ್ಧಲಿಂಗೇಶ ಲಕ್ಕುಂಡಿ, ಜೈನ ಸಮಾಜದ ಅಧ್ಯಕ್ಷ ಪಿ.ಎ.ಕುಲಕರ್ಣಿ, ಶಿವನಗೌಡ ಗೌಡರ, ಮಂಜುಳಾ ಪೂಜಾರ, ವೈಭವಿ ಸರಗಣಾಚಾರಿ, ಕರಿಷ್ಮಾ ಕಾಟಿಗಾರ, ಶಾಂತಾದೇವಿ ಗೌಡರ, ಶಿವಾನುಭವ ಸಮಿತಿಯ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಸ್ವಾಗತಿಸಿದರು. ಪ್ರೊ.ರಮೇಶ ಕಲ್ಲನಗೌಡರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.