ADVERTISEMENT

ಕಳಪೆ ಬಿತ್ತನೆ ಬೀಜ: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 9:32 IST
Last Updated 10 ಫೆಬ್ರುವರಿ 2018, 9:32 IST
ನರೇಗಲ್ ರೈತ ಸಂಪರ್ಕ ಕೇಂದ್ರದಿಂದ ಕಳಪೆ ಗುಣಮಟ್ಟದ ಜೋಳದ ಬೀಜಗಳನ್ನು ಪೂರೈಕೆ ಮಾಡಲಾಗಿದೆ ಎಂದು ಆಗ್ರಹಿಸಿ ರೈತರು ಶುಕ್ರವಾರ ಜೋಳದ ಬೆಳೆಗಳ ಸಮೇತ ಪ್ರತಿಭಟನೆ ನಡೆಸಿದರು
ನರೇಗಲ್ ರೈತ ಸಂಪರ್ಕ ಕೇಂದ್ರದಿಂದ ಕಳಪೆ ಗುಣಮಟ್ಟದ ಜೋಳದ ಬೀಜಗಳನ್ನು ಪೂರೈಕೆ ಮಾಡಲಾಗಿದೆ ಎಂದು ಆಗ್ರಹಿಸಿ ರೈತರು ಶುಕ್ರವಾರ ಜೋಳದ ಬೆಳೆಗಳ ಸಮೇತ ಪ್ರತಿಭಟನೆ ನಡೆಸಿದರು   

ನರೇಗಲ್: ಪಟ್ಟಣದ ರೈತ ಸಂಪರ್ಕ ಕೇಂದ್ರದಿಂದ ಹೋಬಳಿಯಲ್ಲಿ ಕಳಪೆ ಗುಣಮಟ್ಟದ ಬಿಳಿ ಜೋಳದ ಬೀಜಗಳನ್ನು ಪೂರೈಕೆ ಮಾಡಲಾಗಿದೆ ಎಂದು ರಾಜ್ಯ ರೈತ ಸೇನೆ, ರಾಜ್ಯ ರೈತ ಒಕ್ಕೂಟ ಹಾಗೂ ವಿವಿಧ ಸಂಘಟನೆಯ ಕಾಯಕರ್ತರು ಶುಕ್ರವಾರ ಜೋಳದ ಬೆಳೆ ಸಮೇತ ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 11 ಗಂಟೆಗೆ ಬಸ್ ನಿಲ್ದಾಣದಿಂದ ರೈತ ಸಂಪರ್ಕ ಕೇಂದ್ರದವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡ ಕಾರ್ಯಕರ್ತರು ಕಳಪೆ ಬೀಜ ವಿತರಣೆ ಮಾಡಿದ ಕೃಷಿ ಅಧಿಕಾರಿಗಳ ವಿರುದ್ಧ ಹಾಗೂ ಕಂಪನಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ರೈತ ಒಕ್ಕೂಟದ ಅಧ್ಯಕ್ಷ ಶರಣಪ್ಪ ಧರ್ಮಾಯತ ಮಾತನಾಡಿ, ಹೋಬಳಿಯ ಸಾವಿರಾರು ಎಕರೆ ಭೂಮಿಯಲ್ಲಿ ಬಾಗಲಕೋಟೆಯ ಸಾಗರ ಸೀಡ್ಸ್ ಕಂಪನಿಯವರು ನೀಡಿರುವ ಜೋಳದ ಬೀಜಗಳನ್ನು ರೈತಸಂಪರ್ಕ ಕೇಂದ್ರದಿಂದ ಪಡೆದು ಬಿತ್ತನೆ ಮಾಡಿರುವ ಪ್ರತಿ ರೈತನ ಬೆಳೆಗಳು ಕಾಡಿಗೆ ರೋಗಕ್ಕೆ ತುತ್ತಾಗಿವೆ. ಈ ಕುರಿತು ಮಾಹಿತಿ ಇದ್ದರು ಕೃಷಿ ಅಧಿಕಾರಿಗಳು ಈವರೆಗೂ ಕಳಪೆ ಬೀಜ ಪೂರೈಕೆ ಮಾಡಿದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆ. ಬೀಜ ಖರೀದಿಯ ವೇಳೆ ರಸೀದಿಯನ್ನು ಕೇಳಿದರೂ ನೀಡಿಲ್ಲ ಎಂದು ಆರೋಪಿಸಿದರು.

ADVERTISEMENT

ರೈತ ಸೇನಾ ಅಧ್ಯಕ್ಷ ಶಶಿಧರ ಓಸುಮಠ ಮಾತನಾಡಿ, ಕೃಷಿ ಇಲಾಖೆ ಅಧಿಕಾರಿಗಳು ಗುಣಮಟ್ಟವಿಲ್ಲದ ಬೀಜವನ್ನು ವಿತರಿಸಿ ಮೋಸ ಮಾಡಿದ್ದಾರೆ. ಹೀಗಾಗಿ ಬೆಳೆಯು ಕಾಡಿಗೆ ರೋಗಕ್ಕೆ ತುತ್ತಾಗಿವೆ. ಆದ್ದರಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಸಿದ್ದೇಶ್ವರ ಕೊಡಳ್ಳಿ ರೈತರ ಮನವೊಲಿಕೆಗೆ ಮುಂದಾದಾಗ ರೈತರು ಅವರಿಗೆ ಘೇರಾವ್‌ ಹಾಕಿದರು. ನಂತರ ಸಿದ್ದೇಶ್ವರ ಅವರು ಕಳಪೆ ಗೊಬ್ಬರ ಕುರಿತು ಮಾಹಿತಿ ಸಂಗ್ರಹಿಸಲು ರೈತರ ಜಮೀನಿಗೆ ಭೇಟಿ ನೀಡಿದರು.

ನಂತರ ಮಾತನಾಡಿದ ಅವರು, ಈಗಾಗಲೇ ಈ ಭಾಗದ ರೈತರ ಮನವಿಯನ್ನು ಮೇಲಧಿಕಾರಿಗಳಿಗೆ ರವಾನಿಸಲಾಗಿದ್ದು ರೈತರ ಜಮೀನುಗಳಿಗೆ ಬಂದು ಪರೀಕ್ಷೆ ನಡೆಸಲು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಆದ್ದರಿಂದ ನಮಗೆ ಸ್ವಲ್ಪ ಸಮಯಾವಕಾಶ ಕೊಡಿ ಎಂದರು.

ಆದರೆ ಪ್ರತಿಭಟನಾಕಾರರು ಜಿಲ್ಲಾ ಕೃಷಿ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದಾಗ ದೂರವಾಣಿಯ ಮೂಲಕ ರೈತರ ನಿಲುವನ್ನು ಜಿಲ್ಲಾ ಮೇಲಧಿಕಾರಿಗಳಿಗೆ ಸಿದ್ದೇಶ್ವರ ತಿಳಿಸಿದರು. ಆದಷ್ಟು ಬೇಗನೆ ಮುಂದಿನ ಕ್ರಮವನ್ನು ಕೈಗೊಂಡು ವೈಜ್ಞಾನಿಕವಾಗಿ ಪರಿಶೀಲಿಸಿದ ನಂತರ ಸೂಕ್ತ ಪರಿಹಾರವನ್ನು ನೀಡಲಾಗುವುದು. ಇದಕ್ಕೆ ರೈತರು ಸಹಕರಿಸಬೇಕು ಎಂದು ದೂರವಾಣಿ ಮೂಲಕ ಮನವಿ ಮಾಡಿದಾಗ ರೈತರು ಪ್ರತಿಭಟನೆಯನ್ನು ಹಿಂಪಡೆದರು.

ಆನಂದ ಕೊಟಗಿ, ಚಂದ್ರು ಧರ್ಮಾಯತ, ನರೇಶ ಜೋಳದ, ಅಶೋಕ ಬೇವಿನಕಟ್ಟಿ, ನಿಂಗಪ್ಪ ಹೊನ್ನಾಪೂರ, ರಮೇಶ ಕಾಟಿ, ರಾಜೇಂದ್ರ ಜಕ್ಕಲಿ, ಪ್ರಸಾದ ಹಾಗೂ ವಿವಿಧ ಸಂಘಟನೆಯ ಸದಸ್ಯರು ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.