ADVERTISEMENT

‘ಮಹದಾಯಿ ವಿಚಾರದಲ್ಲಿ ರಾಜಕೀಯ ಸಲ್ಲ’

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 9:25 IST
Last Updated 19 ಫೆಬ್ರುವರಿ 2018, 9:25 IST

ನರಗುಂದ: ‘ಮಹದಾಯಿ ವಿಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಆರೋಪ ಪ್ರತ್ಯಾರೋಪ ಮಾಡುವುದನ್ನು ಬಿಡಬೇಕು. ಮಹದಾಯಿ ಯೋಜನೆ ಜಾರಿಗೊಳಿಸುವ ವಿಷಯದಲ್ಲಿ ರಾಜಕೀಯ ಮಾಡಬಾರದು’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ಶಿವಪ್ಪ ಕುರಹಟ್ಟಿ ಹೇಳಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 949ನೇ ದಿನವಾದ ಭಾನುವಾರ ಅವರು ಮಾತನಾಡಿದರು.

‘ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ರಾಜಕೀಯ ಪಕ್ಷಗಳ ರೋಷಾವೇಶ ಹೆಚ್ಚಾಗುತ್ತಿದೆ. ರೈತರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಸರ್ಕಾರಗಳು ರಾಜಕೀಯ ಮಾಡುವ ಮೂಲಕ ಸಾಮಾನ್ಯರಿಗೆ ತೊಂದರೆ ನೀಡುತ್ತಿವೆ. ಬಿಜೆಪಿ, ಕಾಂಗ್ರೆಸ್‌ ಪರಸ್ಪರ ಟೀಕಿಸುವುದರಲ್ಲೆ ಕಾಲ ಕಳೆಯುತ್ತಿವೆ, ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಈಗಾಗಲೇ ನ್ಯಾಯಮಂಡಳಿ ಸೂಚಿಸಿದಂತೆ ಮೂರು ರಾಜ್ಯಗಳು ಒಂದಾಗಿ ಮಾತುಕತೆ ನಡೆಸಬೇಕಿತ್ತು. ಆದರೆ, ಅದು ನಡೆಯಲಿಲ್ಲ. ರಾಜಕೀಯ ಪಕ್ಷಗಳು ಸುಳ್ಳು ಭರವಸೆ ನೀಡುವುದು ಬಿಟ್ಟು, ಸಮಸ್ಯೆ ಪರಿಹರಿಸುವುದಕ್ಕೆ ಶ್ರಮಿಸಬೇಕಿದೆ’ ಎಂದರು.

ADVERTISEMENT

‘ಮಹದಾಯಿಗಾಗಿ ಪ್ರತಿಯೊಬ್ಬರ ಪ್ರಯತ್ನ ಅಗತ್ಯವಾಗಿದೆ. ನ್ಯಾಯಮಂಡಳಿಯ ತೀರ್ಪು ನಮ್ಮ ಪರವಾಗಿ ಬರುವಂತೆ ರಾಜ್ಯ ಸರ್ಕಾರ ಎಚ್ಚರವಹಿಸಬೇಕಿದೆ. ಎಲ್ಲ ದಾಖಲಾತಿಗಳನ್ನು ನ್ಯಾಯಮಂಡಳಿಗೆ ಒದಗಿಸಬೇಕು. ಜನಪ್ರತಿನಿಧಿಗಳು ರೈತರ ಪರವಾದ ಕಾಳಜಿವಹಿಸಬೇಕು ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ಶ್ರೀಶೈಲ ಮೇಟಿ ಒತ್ತಾಯಿಸಿದರು.

ಪರಶುರಾಮ ಜಂಬಗಿ, ಹನಮಂತ ಸರನಾಯ್ಕರ, ಯಲ್ಲಪ್ಪ ಗುಡದೇರಿ, ಚನ್ನಪ್ಪಗೌಡ ಪಾಟೀಲ, ವೆಂಕಪ್ಪ ಹುಜರತ್ತಿ, ವೀರಣ್ಣ ಸೊಪ್ಪಿನ, ಎಸ್‌.ಬಿ.ಜೋಗಣ್ಣವರ, ಕಾಡಪ್ಪ ಕಾಕನೂರು ಧರಣಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.