ADVERTISEMENT

ಮುಂಡರಗಿ: ಬಿಸಿಲು– ವನ್ಯಜೀವಿಗಳಿಗೆ ವರದಾನವಾದ ಅರಣ್ಯ ನೀರಿನ ತೊಟ್ಟಿ

ಕಾಶಿನಾಥ ಬಿಳಿಮಗ್ಗದ
Published 5 ಏಪ್ರಿಲ್ 2024, 6:02 IST
Last Updated 5 ಏಪ್ರಿಲ್ 2024, 6:02 IST
ಮುಂಡರಗಿ ತಾಲ್ಲೂಕಿನ ಕಪ್ಪತಗುಡ್ಡದ ಅರಣ್ಯ ಪ್ರದೇಶದಲ್ಲಿ ನಿರ್ಮಿಸಿರುವ ಕೃತಕ ನೀರಿನ ತೊಟ್ಟಿಗಳಿಗೆ ನೀರು ತುಂಬಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿ
ಮುಂಡರಗಿ ತಾಲ್ಲೂಕಿನ ಕಪ್ಪತಗುಡ್ಡದ ಅರಣ್ಯ ಪ್ರದೇಶದಲ್ಲಿ ನಿರ್ಮಿಸಿರುವ ಕೃತಕ ನೀರಿನ ತೊಟ್ಟಿಗಳಿಗೆ ನೀರು ತುಂಬಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿ   

ಮುಂಡರಗಿ: ಮಳೆ ಕೊರತೆ, ಜಲ ಸಂಪನ್ಮೂಲಗಳಲ್ಲಿ ನೀರಿನ ಕೊರತೆ, ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮಾನವನ ವಿಪರೀತ ಹಸ್ತಕ್ಷೇಪ ಮೊದಲಾದ ಕಾರಣಗಳಿಂದ ಕಪ್ಪತಗುಡ್ಡದ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವನ್ಯಜೀವಿ ಸಂಕುಲವು ನೀರು ದೊರೆಯದೇ ಪರದಾಡುತ್ತಿವೆ.

ಈಚಿನ ದಿನಗಳಲ್ಲಿ ಬಿಸಿಲಿನ ತಾಪ ವಿಪರೀತವಾಗಿ ಹೆಚ್ಚುತ್ತಿದ್ದು, ಕಪ್ಪತ್ತಗುಡ್ಡದ ಪ್ರಾಣಿ ಸಂಕುಲವು ಬಿಸಿಲಿನ ಝಳಕ್ಕೆ ತತ್ತರಿಸತೊಡಗಿವೆ. ಕಪ್ಪತಗುಡ್ಡದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ವನ್ಯಜೀವಿಗಳ ದಾಹ ತಣಿಸಲು ತಾಲ್ಲೂಕು ಅರಣ್ಯ ಇಲಾಖೆಯು ಕಪ್ಪತಗುಡ್ಡದ ಅರಣ್ಯದಲ್ಲಿ ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಿದೆ. ಈ ತೊಟ್ಟಿಗಳಿಗೆ ನಿಯಮಿತವಾಗಿ ಟ್ಯಾಂಕರ್ ಮೂಲಕ ನೀರು ತುಂಬಿಸಿ ವನ್ಯಜೀವಿಗಳಿಗೆ ಕುಡಿಯುವ ನೀರು ಪೂರೈಸುತ್ತಿದೆ.

ಜಿಲ್ಲೆಯ ಮುಂಡರಗಿ, ಶಿರಹಟ್ಟಿ ಹಾಗೂ ಗದಗ ತಾಲ್ಲೂಕುಗಳಲ್ಲಿ ವಿಶಾಲವಾಗಿ ಹಬ್ಬಿರುವ ಕಪ್ಪತಗುಡ್ಡದ ಅರಣ್ಯ ಪ್ರದೇಶದಲ್ಲಿ ಅಗಣಿತ ವನ್ಯ ಜೀವಿಗಳು ವಾಸಿಸುತ್ತಿವೆ. ಕಪ್ಪತಗುಡ್ಡದ 24,415.73 ಹೆಕ್ಟೇರ್‌ ಪ್ರದೇಶವನ್ನು ವನ್ಯಜೀವಿಧಾಮ ಎಂದು ಸರ್ಕಾರ ಘೋಷಿಸಿದೆ. ಅಲ್ಲಿ ಚಿರತೆ, ಕಾಡುಹಂದಿ, ನರಿ, ಮೊಲ, ಕತ್ತೆಕಿರುಬ, ನವಿಲು, ಗೊರವಂಕ ಮೊದಲಾದ ವೈವಿಧ್ಯಮಯ ಪ್ರಾಣಿ ಪಕ್ಷಿಗಳು ವಾಸಿಸುತ್ತಿವೆ.

ADVERTISEMENT

ಈ ಮೊದಲು ಕಪ್ಪತಗುಡ್ಡದ ವ್ಯಾಪ್ತಿಯಲ್ಲಿದ್ದ 20ಕ್ಕೂ ಹೆಚ್ಚು ಕೆರೆ, ಹಳ್ಳ, ಕೊಳ್ಳಗಳು ವನ್ಯಜೀವಿಗಳ ನೀರಿನ ದಾಹವನ್ನು ತೀರಿಸುತ್ತಿದ್ದವು ಈಗ ಬಹುತೇಕ ಜಲ ಸಂಪನ್ಮೂಲಗಳು ಹೂಳು ತುಂಬಿ ಬರಿದಾಗಿದ್ದು, ಬೇಸಿಗೆಯಲ್ಲಿ ವನ್ಯ ಜೀವಿಗಳು ನೀರು ದೊರಯದೇ ಪರದಾಡುವಂತಾಗಿದೆ.

ಜಲಸಂಪನ್ಮೂಲಗಳು ಸಂಪೂರ್ಣ ಬರಿದಾಗಿರುವುದರಿಂದ ಕಪ್ಪತಗುಡ್ಡದ ವನ್ಯಜೀವಿಗಳು ತಮ್ಮ ದಾಹ ತಣಿಸಿಕೊಳ್ಳಲು ಸುತ್ತಮುತ್ತಲಿನ ನೀರಾವರಿ ಪ್ರದೇಶಗಳಿಗೆ ಮತ್ತು ನೀರಿನ ತೊಟ್ಟಿಗಳಿಗೆ ಲಗ್ಗೆ ಇಡತೊಡಗಿವೆ.

ಕಪ್ಪತಗುಡ್ಡದ ಶಿರಹಟ್ಟಿ ಅರಣ್ಯ ವ್ಯಾಪ್ತಿಯ ಕಡಕೋಳ, ಇರಬೆಂಚಿಕೊಳ್ಳ, ಕರಡಿಕೊಳ್ಳ, ಮಜ್ಜೂರ ದಾರಿ ಪ್ರದೇಶ, ಮುಂಡರಗಿ ತಾಲ್ಲೂಕಿನ ಡಂಬಳ, ಡೋಣಿ, ಶಿಂಗಟಾಲಕೇರಿತಾಂಡಾ, ಹಾರೋಗೇರಿ, ಕಲಕೇರಿ, ಹಿರೇವಡ್ಡಟ್ಟಿ, ಜಾಲವಾಡಗಿ, ಕೆಲೂರ, ಮುರಡಿ ಮತ್ತು ಹಮ್ಮಿಗಿ ಗ್ರಾಮಗಳ ಹತ್ತಿರ ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ.

ನೀರಿನ ತೊಟ್ಟಿಗಳಿಗೆ ಪ್ರತಿ 15 ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತದೆ. ತೊಟ್ಟಿಗಳ ಸಮೀಪ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ವನ್ಯಜೀವಿಗಳು ನೀರು ಕುಡಿಯುತ್ತಿರುವ ದೃಶ್ಯಗಳು ಕ್ಯಾಮರಾಗಳಲ್ಲಿ ಸೆರೆಯಾಗಿವೆ. ಕೃತಕ ನೀರಿನ ತೊಟ್ಟಿಗಳ ಬಳಿ ಬರುವ ವನ್ಯಜೀವಿಗಳು ನಿರ್ಭೀತಿಯಿಂದ ನೀರು ಕುಡಿಯುತ್ತಿರುವುದು ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.