ಗದಗ: ‘ಗೃಹಸಚಿವ ಜಿ.ಪರಮೇಶ್ವರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕಾಂಗ್ರೆಸ್‌ನ ಒಂದು ಗುಂಪು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಎಲ್ಲ ಮಾಹಿತಿ ಕಳಿಸುತ್ತದೆ. ಬಳಿಕ ಇದು ರಾಜಕೀಯ ಪ್ರೇರಿತ ದಾಳಿ ಎಂದು ಅವರೇ ನಾಟಕವಾಡುತ್ತಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
‘ಜಿ.ಪರಮೇಶ್ವರ ಬಗ್ಗೆ ನಮಗೆ ಗೌರವ ಇದೆ. ಅವರು ಸಭ್ಯ ರಾಜಕಾರಣಿ. ಜಾರಿ ನಿರ್ದೇಶನಾಲಯಕ್ಕೆ ಮಾಹಿತಿಗಳನ್ನು ಕಳಿಸಿದ್ದು ಯಾರು ಎಂಬುದು ಸಿಎಂ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಗುಪ್ತಚರ ಇಲಾಖೆ ಅವರ ಬಳಿಯೇ ಇದೆ’ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ಗೃಹಸಚಿವ ಜಿ. ಪರಮೇಶ್ವರ ಅವರಿಗೆ ತೊಂದರೆ ಕೊಡಬೇಕು ಎಂಬ ಯಾವ ಉದ್ದೇಶವೂ ಕೇಂದ್ರ ಸರ್ಕಾರಕ್ಕಿಲ್ಲ. ತಪ್ಪು ಮಾಡಿದಾಗ, ಯಾರೇ ಆದರೂ ಕಾನೂನು ಕ್ರಮ ಆಗುತ್ತದೆ. ಎಲ್ಲದಕ್ಕೂ ರಾಜಕಾರಣ ಬೆರೆಸುವುದು ಸರಿಯಲ್ಲ’ ಎಂದರು.
ದಿಗ್ಬಂಧನಕ್ಕೆ ಖಂಡನೆ:
‘ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ದಿಗ್ಬಂಧನ ಮಾಡಿದ್ದು ಖಂಡನೀಯ. ವಿರೋಧ ಪಕ್ಷದ ನಾಯಕರ ಕಾರಿಗೆ ಮಸಿ ಬಳಿಯುವುದು, ಅವರ ಮೇಲೆ ಹಲ್ಲೆಗೆ ಯತ್ನಿಸುವುದು, ಗೂಂಡಾಗಿರಿ ಮಾಡಿ ಗಂಟೆಗಟ್ಟಲೇ ಒಳಗೆ ಕೂಡಿಸುವುದು, ಪೊಲೀಸರನ್ನು ಮೂಕ ಪ್ರೇಕ್ಷಕರನ್ನಾಗಿಸುವುದು ಸರಿಯಲ್ಲ’ ಎಂದು ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
‘ದಿಗ್ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಷ್ಟು ಜನರ ಮೇಲೆ ಎಫ್‌ಐಆರ್ ಆಗಿದೆ? ಒಬ್ಬ ದಲಿತ, ಹಿಂದುಳಿದ ವರ್ಗದ ಸಮಾಜಕ್ಕೆ ಸೇರಿದವರನ್ನು ಕೂಡಿಹಾಕಿ, ಗೂಂಡಾಗಿರಿ ಮಾಡಲು ನಾಚಿಕೆ ಆಗುವುದಿಲ್ಲವೇ? ಪೊಲೀಸರು ಕಾನೂನು ಪ್ರಕಾರ ಕೆಲಸ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.