ಗದಗ: ಅಮೃತ ಭಾರತ ಸ್ಟೇಷನ್ ಯೋಜನೆಯಡಿ (ಎಬಿಎಸ್‌ಎಸ್) ಪುನಾರಾಭಿವೃದ್ಧಿಗೊಂಡಿರುವ ನೈರುತ್ವ ರೈಲ್ವೆ ವಿಭಾಗದ ಧಾರವಾಡ, ಗದಗ, ಬಾಗಲಕೋಟೆ, ಗೋಕಾಕ ಮತ್ತು ಮುನಿರಾಬಾದ್ ಸೇರಿ ದೇಶದ ವಿವಿಧೆಡೆ ಒಟ್ಟು 103 ರೈಲು ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮೇ 22ರಂದು ಉದ್ಘಾಟಿಸುವರು.
ಎಬಿಎಸ್‌ಎಸ್ ಅಡಿ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ 2023ರ ಆಗಸ್ಟ್ 6ರಂದು ವರ್ಚುವಲ್ ವೇದಿಕೆ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದರು.
ಗದಗ ರೈಲ್ವೆ ನಿಲ್ದಾಣ ₹23.24 ಕೋಟಿ, ಧಾರವಾಡ ರೈಲ್ವೆ ನಿಲ್ದಾಣ ₹17.01 ಕೋಟಿ, ಮುನಿರಾಬಾದ್ ₹18.40 ಕೋಟಿ, ಗೋಕಾಕ್ ₹16.98 ಕೋಟಿ, ಬಾಗಲಕೋಟೆ ರೈಲ್ವೆ ನಿಲ್ದಾಣ ₹16.06 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿವೆ.
ನವೀಕರಿಸಿದ ಗದಗ ರೈಲ್ವೆ ನಿಲ್ದಾಣವು ಆಧುನಿಕ ಸೌಲಭ್ಯಗಳೊಂದಿಗೆ ಜಿ ಪ್ಲಸ್ 1 ಅಂತಸ್ತಿನ ಕಟ್ಟಡ ಹೊಂದಿದೆ. ಪ್ರವೇಶ ದ್ವಾರ ಸಂಪೂರ್ಣ ಬದಲಾಗಿದೆ. ಜನದಟ್ಟಣೆ ನಿಯಂತ್ರಿಸಲು ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರ, ಎರಡು ಎಸ್ಕಲೇಟರ್‌ಗಳು, ಲಿಫ್ಟ್ ಸೌಲಭ್ಯ, ಪಾರ್ಕಿಂಗ್ ಸೌಲಭ್ಯ, 12 ಮೀಟರ್‌ನ ಪಾದಚಾರಿ ಮೇಲ್ಸೆತುವೆ, ಕಾರು, ಬೈಕ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸೌಲಭ್ಯ, ಅತ್ಯಾಧುನಿಕ ಶೌಚಾಲಯಗಳು, ಹವಾನಿಯಂತ್ರಿತ ವೇಯ್ಟಿಂಗ್ ರೂಂಗಳು, ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ಗಳ ಜತೆಗೆ ಇನ್ನೂ ಹತ್ತು ಹಲವು ಸೌಲಭ್ಯಗಳನ್ನು ಹೊಂದಿದೆ.
‘ಅಮೃತ ಭಾರತ ಸ್ಟೇಷನ್ ಯೋಜನೆಯಡಿ ನೈರುತ್ಯ ರೈಲ್ವೆ ವಿಭಾಗ 5 ರೈಲು ನಿಲ್ದಾಣಗಳು ಮೇಲ್ದರ್ಜೆಗೇರಿವೆ. ಕೇಂದ್ರ ಸರ್ಕಾರವು ರೈಲು ನಿಲ್ದಾಣಗಳಲ್ಲಿ ಅತ್ಯಾಧುನಿಕ ಸೌಲಭ್ಯ ಒದಗಿಸುವ ಮೂಲಕ ಪ್ರಯಾಣಿಕ ಸ್ನೇಹಿ ವಾತಾವರಣ ಸೃಷ್ಟಿಸಿದೆ’ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.