ಗದಗ: ‘ಕಾಶ್ಮೀರದ ಶಾಂತಿ ಮತ್ತು ಭದ್ರತೆಗೆ ಉಗ್ರರು ತೀವ್ರ ಸವಾಲು ಒಡ್ಡುತ್ತಿರುವುದು ಕಳವಳಕಾರಿ ಸಂಗತಿ. ಕೇಂದ್ರ ಸರ್ಕಾರ ಉಗ್ರರನ್ನು ಮಟ್ಟ ಹಾಕಲು ಕಠಿಣ ಕ್ರಮಗಳನ್ನು ಕೈಗೊಂಡು, ಅವರಿಗೆ ತಕ್ಕ ಉತ್ತರ ನೀಡಬೇಕು’ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಪ್ರಮುಖ ರವಿ ನರೇಗಲ್ ಆಗ್ರಹಿಸಿದರು.
ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗದಗ ಘಟಕದ ವತಿಯಿಂದ ನಗರದ ಹಾತಲಗೇರಿ ನಾಕಾದಿಂದ ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಿ ಮಾತನಾಡಿದರು.
‘ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ಕೃತ್ಯ ಹೇಡಿತನದಿಂದ ಕೂಡಿದ್ದು, ಇದನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ’ ಎಂದರು.
‘ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ, ಕೆಲವು ಸಂಘಟನೆಗಳು ಹಾಗೂ ವ್ಯಕ್ತಿಗಳು ಭಯೋತ್ಪಾದಕರೊಂದಿಗೆ ಕೈಜೋಡಿಸುವ ಮೂಲಕ ಹೆತ್ತ ತಾಯಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಜಿಲ್ಲಾ ಎಸ್‌ಎಫ್‌ಡಿ ಪ್ರಮುಖ್ ತೇಜಸ್ ಕಣ್ವಳ್ಳಿ ಅವರು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ನಗರ ಕಾರ್ಯದರ್ಶಿ ರವಿ ಲಕ್ಕಣ್ಣವರ, ಶಿವಯೋಗಿನ್ ಹಾಗೂ ಅನೇಕ ಕಾರ್ಯಕರ್ತರು ಹಾಗೂ ಜೆಟಿ ಪದವಿಪೂರ್ವ ಕಾಲೇಜು, ಮನೋರಮಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.