ನರಗುಂದ: ‘ಮೌನಾನುಷ್ಠಾನಗಳು, ವ್ರತಗಳು ಮನುಷ್ಯನಿಗೆ ನೆಮ್ಮದಿ ನೀಡುತ್ತವೆ. ಮಾತು ಬೆಳ್ಳಿ ಮೌನ ಬಂಗಾರ ಎನ್ನುವಂತೆ ಮೌನದಿಂದ ಸಾಧಿಸಿ, ಸಮಾಜಕ್ಕೆ ಕೊಡುಗೆಯಾಗಿ ಹೊರಹೊಮ್ಮಬೇಕು’ ಎಂದು ಲಿಂಗನಬಂಡಿಯ ಮೌನೇಶ್ವರ ಮಠದ ಉಳವೇಂದ್ರ ಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಶಿರೋಳದ ಯಚ್ಚರೇಶ್ವರ ಗವಿಮಠದಲ್ಲಿ ಈಚೆಗೆ ನಡೆದ ಅಭಿನವ ಯಚ್ಚರ ಸ್ವಾಮಿಗಳು ಲೋಕಕಲ್ಯಾಣಾರ್ಥ ಕೈಗೊಂಡ ಮೌನಾನುಷ್ಠಾನ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.
‘ಮಾತನಾಡುವುದಕ್ಕಿಂತ ಮೌನವಾಗಿದ್ದು ಸಾಧಿಸಬೇಕಾಗಿದೆ. ಮನುಷ್ಯ ಸನ್ಮಾರ್ಗದಲ್ಲಿ ಬದುಕಲು ಮೌನ ಉತ್ತಮ ಮಾರ್ಗವಾಗಿದೆ. ಇದನ್ನು ಕೈಗೊಂಡ ಯಚ್ಚರ ಮಹಾಸ್ವಾಮಿಗಳ ಕಾರ್ಯ ಶ್ಲಾಘನೀಯ’ ಎಂದರು.
ಕಿತ್ತಲಿಯ ಸಿದ್ದರಾಮೇಶ್ವರ ಮಠದ ಮಂಜುನಾಥ ಸ್ವಾಮಿಗಳು ಮಾತನಾಡಿ, ‘ಸ್ವಾಮಿಗಳು ಹೆಚ್ಚು ಅಂತರಂಗದ ಸಾಧನೆಯಲ್ಲಿ ತೊಡಗಿಕೊಳ್ಳುವುದು ಅವಶ್ಯ. ಬಹಿರಂಗದ ಸಾಧನೆಗಿಂತ ಅಂತರಂಗದ ಸಾಧನೆಗೆ ಹೆಚ್ಚಿನ ಶಕ್ತಿ ಇದೆ. ಹಿಂದೆ ತಪಸ್ವಿಗಳು ಸಾಧುಗಳು, ಯೋಗಿಗಳು ಅನುಷ್ಠಾನದಿಂದಲೇ ಲೋಕವನ್ನು ಉದ್ಧಾರ ಮಾಡಿದ್ದಾರೆ. ಅನುಷ್ಠಾನ ಎಂದರೆ ಆತ್ಮವನ್ನು ಪರಮಾತ್ಮನಲ್ಲಿ ಬೆರೆಸಿಕೊಳ್ಳುವ ವಿಧಾನ’ ಎಂದರು.
ವಿಶೇಷವಾಗಿ ದುರ್ಗಾ ನಮಸ್ಕಾರ ಪೂಜೆ ಮತ್ತು ಅಭಿನವ ಯಚ್ಚರ ಸ್ವಾಮಿಗಳ ಪಾದಪೂಜೆ ನೆರವೇರಿಸಲಾಯಿತು. ಗ್ರಾಮದ ಸದ್ಬಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.