ADVERTISEMENT

ಗದಗ: ‘ಕೃಷಿ’ ಆಸಕ್ತರಿಗಾಗಿ ತಾಂತ್ರಿಕ ಪದವಿ

ಅಗ್ರಿಕಲ್ಚರಲ್‌ ಎಂಜಿನಿಯರಿಂಗ್‌; ರಾಜ್ಯದಲ್ಲೇ ಮೊದಲಬಾರಿಗೆ ಪರಿಚಯ

ಸತೀಶ ಬೆಳ್ಳಕ್ಕಿ
Published 30 ಜುಲೈ 2021, 4:09 IST
Last Updated 30 ಜುಲೈ 2021, 4:09 IST
ಡಾ. ಸಿದ್ಧರಾಮ ಸ್ವಾಮೀಜಿ
ಡಾ. ಸಿದ್ಧರಾಮ ಸ್ವಾಮೀಜಿ   

ಗದಗ: ಐಟಿ ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಟೆಕಿಗಳು ಕೂಡ ಇಂದು ಕೃಷಿಯತ್ತ ಆಸಕ್ತಿಯ ನೋಟ ಬೀರುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಸಂಬಳದ ಉದ್ಯೋಗ ಬಿಟ್ಟು ಅನೇಕರು ಕೃಷಿಯಲ್ಲಿ ತೊಡಗಿಸಿಕೊಂಡ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇಂತಹ ಸಂದರ್ಭದಲ್ಲಿ ಕೃಷಿಯನ್ನೇ ಶಾಸ್ತ್ರೀಯವಾಗಿ ಕಲಿಸುವ ಅಗ್ರಿಕಲ್ಚರಲ್‌ ಎಂಜಿನಿಯರಿಂಗ್‌ ಪದವಿಯನ್ನು ಪರಿಚಯಿಸಿದೆ ಗದುಗಿನ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜು.

ನಮ್ಮದು ಕೃಷಿ ಪ್ರಧಾನ ದೇಶ. ಮುಂದುವರಿದ ದೇಶಗಳಂತೆ ಇಲ್ಲಿ ಕೂಡ ತಾಂತ್ರಿಕತೆ ಬಳಸಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಜ್ಞಾನವನ್ನು ಈ ಎಂಜಿನಿಯರಿಂಗ್‌ ಪದವಿಯಲ್ಲಿ ಕಲಿಸಲಾಗುತ್ತದೆ. ಅದಕ್ಕೆ ತಕ್ಕಂತೆ ಪಠ್ಯಕ್ರಮ ರೂಪಿಸಲಾಗಿದೆ. ಗದುಗಿನ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜು ರಾಜ್ಯದಲ್ಲೇ ಮೊದಲಬಾರಿಗೆ ಈ ಕೋರ್ಸ್‌ ಪರಿಚಯಿಸಿದ ಹೆಗ್ಗಳಿಕೆಗೆ ‍ಪಾತ್ರವಾಗಿದೆ.

‘ಲಿಂಗೈಕ್ಯ ತೋಂಟದ ಶ್ರೀಗಳಿಗೆ ಕೃಷಿ ಕ್ಷೇತ್ರದ ಬಗ್ಗೆ ಅಪಾರ ಪ್ರೀತಿ ಮತ್ತು ಅಭಿಮಾನ ಇತ್ತು. ಉತ್ತರ ಕರ್ನಾಟಕದ ಜನರು ಕೂಡ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಂಶುಪಾಲರು, ಆಡಳಿತ ಮಂಡಳಿ ಅಗ್ರಿಕಲ್ಚರಲ್‌ ಎಂಜಿನಿಯರಿಂಗ್‌ ವಿಭಾಗ ಆರಂಭಿಸಲು ತೀರ್ಮಾನಿಸಿತು. ಬಿಎಸ್‌ಸಿ ಅಗ್ರಿ ಪದವಿಗೆ ಇಂದು ಸಾಕಷ್ಟು ಬೇಡಿಕೆ ಇದ್ದು, ಅದರಂತೆ ಅಗ್ರಿಕಲ್ಚರಲ್ ಎಂಜಿನಿಯರಿಂಗ್‌ ಕೂಡ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ’ ಎನ್ನುತ್ತಾರೆ ಕಾಲೇಜಿನ ಸಿಬ್ಬಂದಿ ಡಾ. ಮಂಜುನಾಥ ಉತ್ತರ್‌ಕರ್‌.

ADVERTISEMENT

ಅಗ್ರಿಕಲ್ಚರಲ್‌ ಎಂಜಿನಿಯರಿಂಗ್‌ ಪದವಿಯಲ್ಲಿ ಶೇ 65ರಷ್ಟು ಪಠ್ಯ ಕೃಷಿಗೆ ಸಂಬಂಧಿಸಿದ ತಾಂತ್ರಿಕ ಅಂಶಗಳನ್ನು ಒಳಗೊಂಡಿರಲಿದೆ. ಉಳಿದ ಶೇ35ರಷ್ಟು ಪಠ್ಯ ಬಿಎಸ್‌ಸಿ ಅಗ್ರಿಯಂತೆ ಸಾಂಪ್ರದಾಯಿಕವಾಗಿರಲಿದೆ. ಪ್ರಾಯೋಗಿಕ ತರಬೇತಿ ಅಗತ್ಯವಿರುವ ಜಮೀನು ಸಹ ಕ್ಯಾಂಪಸ್‌ ಒಳಗಡೆಯೇ ಲಭ್ಯವಿದೆ. ಪ್ರಸ್ತುತ ವರ್ಷದಲ್ಲಿ ಅಗ್ರಿಕಲ್ಚರಲ್‌ ಎಂಜಿನಿಯರಿಂಗ್‌ ಪದವಿ
ಕಲಿಯಲು 30 ವಿದ್ಯಾರ್ಥಿಗಳಿಗೆ ಅವಕಾಶವಿದೆ.

‘ಹೆಚ್ಚಿನ ವಿದ್ಯಾರ್ಥಿಗಳು ಈಗ ಎಂಜಿನಿಯರಿಂಗ್‌ ಪದವಿಯಲ್ಲಿ ಲಭ್ಯವಿರುವ ಸಾಂಪ್ರದಾಯಿಕ ಕೋರ್ಸ್‌ಗಳ ಬಗ್ಗೆ ಒಲವು ತೋರುತ್ತಿಲ್ಲ. ಅಗ್ರಿಕಲ್ಚರಲ್‌ ಎಂಜಿನಿಯರಿಂಗ್‌ ಪದವಿ ಕಲಿಯುವುದರಿಂದ ಏನೆಲ್ಲಾ ಪ್ರಯೋಜನ ಹಾಗೂ ಉದ್ಯೋಗವಕಾಶಗಳು ಎಷ್ಟಿವೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಹೊಸ ಕೋರ್ಸ್‌ ಬಗ್ಗೆ ನಾಲ್ಕೈದು ಮಂದಿ ವಿಚಾರಿಸಿದ್ದಾರೆ. ಈ ವರ್ಷ ನಮ್ಮ ಕಾಲೇಜಿನ 154 ಮಂದಿ ವಿದ್ಯಾರ್ಥಿಗಳು ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ಉತ್ತಮ ಕಂಪನಿಗಳಿಗೆ ಆಯ್ಕೆಯಾಗಿರುವುದು ಖುಷಿ ನೀಡಿದೆ’ ಎಂದು ಸಿದ್ಧರಾಮ ಸ್ವಾಮೀಜಿ ತಿಳಿಸಿದ್ದಾರೆ.

ಸಾಂಪ್ರದಾಯಿಕ ಎಂಜಿನಿಯರಿಂಗ್‌ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅವರನ್ನು ಕಾಲೇಜಿನತ್ತ ಸೆಳೆಯಲು ಹೊಸ ಕೋರ್ಸ್‌ಗಳು ನೆರವಾಗಲಿವೆ.
- ಸಿದ್ಧರಾಮ ಸ್ವಾಮೀಜಿ, ತೋಂಟದಾರ್ಯ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.