ADVERTISEMENT

ಶ್ರಮಜೀವಿಗಳ ಸಾಹಿತ್ಯವೇ ಜನಪದ: ಅರವಟಗಿಮಠ

ಜನಪದ ಸಾಹಿತ್ಯ ಸರ್ವೇಕ್ಷಣಾ ಕಾರ್ಯ: ವಿದ್ಯಾರ್ಥಿಗಳಿಂದ ಮನೆ ಭೇಟಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 4:35 IST
Last Updated 14 ಡಿಸೆಂಬರ್ 2025, 4:35 IST
ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೊಂಬಳ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಜನಪದ ಕಥೆ, ಕಾವ್ಯ, ಒಗಟು, ಒಡಪು, ರಿವಾಯತ್ ಪದ, ಸೋಬಾನೆ ಪದ ನಾಣ್ಣುಡಿಗಳನ್ನು ಗ್ರಾಮಸ್ಥರಿಂದ ಸಂಗ್ರಹಿಸಿದರು.
ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೊಂಬಳ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಜನಪದ ಕಥೆ, ಕಾವ್ಯ, ಒಗಟು, ಒಡಪು, ರಿವಾಯತ್ ಪದ, ಸೋಬಾನೆ ಪದ ನಾಣ್ಣುಡಿಗಳನ್ನು ಗ್ರಾಮಸ್ಥರಿಂದ ಸಂಗ್ರಹಿಸಿದರು.   

ಗದಗ: ‘ಓದು ಬರಹ ಬಾರದ; ಬದುಕಿನ ಅನುಭವದಿಂದ ತಮ್ಮ ಸುಖ, ಸಂತೋಷ, ಕನಸು, ಕಲ್ಪನೆ ಮತ್ತು ನೋವು-ನಲಿವುಗಳನ್ನು ಹಾಡು-ಕುಣಿತದ ಮೂಲಕ ಅಭಿವ್ಯಕ್ತಿಗೊಳಿಸಿದ ಶ್ರಮಜೀವಿಗಳ ಸಾಹಿತ್ಯವೇ ಜನಪದ’ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಅಂದಯ್ಯ ಅರವಟಗಿಮಠ ಹೇಳಿದರು.

ನಗರದ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗವು ತನ್ನ ವ್ಯಾಸಂಗ ವಿಸ್ತೀರ್ಣ ಕಾರ್ಯಕ್ರಮದ ಭಾಗವಾಗಿ ಗದಗ ತಾಲ್ಲೂಕಿನ ಹೊಂಬಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನಪದ ಸಾಹಿತ್ಯ ಸರ್ವೇಕ್ಷಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾನವೀಯ ಮೌಲ್ಯಗಳಿಂದ ತುಂಬಿರುವ ಜನಪದ ಸಾಹಿತ್ಯ ಜನರ ಸಂತೋಷ, ದುಃಖ, ಶ್ರಮದ ಸಂದರ್ಭದಲ್ಲಿ ರಚಿತವಾಗಿದೆ. ಹಳ್ಳಿಯ ಕಣದಲ್ಲಿ ರಾಶಿ ಮಾಡುವಾಗ, ಹಬ್ಬ-ಹುಣ್ಣಿಮೆಗಳಲ್ಲಿ, ಮದುವೆ-ಮುಂಜಿವೆಗಳಲ್ಲಿ, ಬೀಸುವಾಗ, ಕುಟ್ಟುವಾಗ, ತಮ್ಮ ಶ್ರಮವನ್ನು ಕಡಿಮೆ ಮಾಡಿಕೊಳ್ಳ ಲು ಜನರು ತಮ್ಮ ಭಾವಗಳನ್ನು ಪರಸ್ಪರ ಹಾಡಿಕೊಂಡು ಕುಣಿಯುತ್ತಿದ್ದರು. ಇದೇ ಜನಪದ ಸಾಹಿತ್ಯದ ಮೂಲ ಎಂದರು.

ADVERTISEMENT

ಕನ್ನಡ ಉಪನ್ಯಾಸಕ ಪ್ರೊ. ರಾಮಚಂದ್ರ ಪಡೇಸೂರು ಮಾತನಾಡಿ, ಆಧುನಿಕ ಬದುಕಿನ ಬವಣೆಗೆ ಸಿಕ್ಕು ಜನಪದ ಪ್ರಕಾರಗಳಾದ ಒಡಪು, ಒಗಟು, ಗರತಿ ಹಾಡುಗಳು, ಜನಪದ ಆಟಗಳು ಇಂದು ಕಣ್ಮರೆಯಾಗುತ್ತಿವೆ. ಯುವಜನತೆಯು ಇದರತ್ತ ಒಲವು ಮೂಡಿಸಿಕೊಳ್ಳದೆ ಹೋದರೆ ಮುಂದೊಂದು ದಿನ ಜನಪದ ಮಾಯವಾಗುವುದರಲ್ಲಿ ಸಂಶಯವಿಲ್ಲ. ಜನರ ಜೀವಾಳವಾಗಿರುವ ಜನಪದ ಉಳಿಸಿ ಬೆಳೆಸಲು ಯುವಸಮೂಹ ಆಸಕ್ತಿ ತೋರಬೇಕು ಎಂದರು.

ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗ್ರಾಮದ ಮನೆಗಳಿಗೆ ಭೇಟಿ ನೀಡಿ ಜನಪದ ಕಥೆ, ಕಾವ್ಯ, ಒಗಟು, ಒಡಪು, ರಿವಾಯತ್ ಪದ, ಸೋಬಾನೆ ಪದ ನಾಣ್ಣುಡಿಗಳನ್ನು ಗ್ರಾಮಸ್ಥರಿಂದ ಸಂಗ್ರಹಿಸಿದರು.

ಗ್ರಾಮಸ್ಥರಾದ ಪಾಲಾಕ್ಷಿ ತೂಕದ, ಶಾಂತಮ್ಮ ಮಠಪತಿ, ಕಳಕಪ್ಪ ದೇವರವರ, ಗುರುಸಿದ್ದವ್ವ ಮುದಕವಿ, ಬಾಬುಸಾಹೇಬ್ ಅಕ್ತಾರ್, ಯಲ್ಲಪ್ಪ ಹೊರಳಗಿ, ಶಂಕ್ರಮ್ಮ ಈಳಿಗೇರ ಉತ್ಸಾಹದಿಂದ ಭಾಗವಹಿಸಿದರು.

ಸರ್ವೇಕ್ಷಣಾ ಕಾರ್ಯದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ವಿಜಯಲಕ್ಷ್ಮೀ ಭಂಡಿವಾಡ, ಅಕ್ಷತಾ ವಡ್ಡರ, ಕಳಕವ್ವ ನೈನಾಪುರ, ಮಮತಾ ಉಳ್ಳಾನಟ್ಟಿ, ಸಂಗವ್ವ ತಳವಾರ, ನಾಗರತ್ನ ಹಾಲನ್ನವರ, ಗೀತಾ ಹಡಪದ ಭಾಗವಹಿಸಿದ್ದರು.

Quote - ಜನಪದವನ್ನು ಆಡಿ ಆನಂದಿಸುವವರ ಸಂಖ್ಯೆ ಹೆಚ್ಚಬೇಕಿದೆ. ತಂತ್ರಜ್ಞಾನವನ್ನು ಪೂರಕವಾಗಿ ಬಳಸಿಕೊಂಡು ಜನಪದ ಕಲೆಗಳನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಬೇಕಿದ್ದು ಈ ಹೊತ್ತಿನ ತುರ್ತು ಪ್ರೊ. ಅಂದಯ್ಯ ಅರವಟಗಿಮಠ ಮುಖ್ಯಸ್ಥರು ಕನ್ನಡ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.