ADVERTISEMENT

ಬಿತ್ತನೆ ಬೀಜ, ಗೊಬ್ಬರ ವಿತರಣೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 13:40 IST
Last Updated 2 ಜೂನ್ 2023, 13:40 IST

ಮುಂಡರಗಿ: ಮುಂಗಾರು ಹಂಗಾಮು ಆರಂಭಗೊಂಡಿದ್ದು, ತಾಲ್ಲೂಕಿನಾದ್ಯಂತ ಮೇ ತಿಂಗಳ ಅಂತ್ಯಕ್ಕೆ 61.30 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ 42ರಷ್ಟು ಮಳೆ ಕೊರತೆಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ಟಿ.ಸಿ. ತಿಳಿಸಿದ್ದಾರೆ.

ಪ್ರಸ್ತುತ ಮುಂಗಾರು ಹಾಗೂ ಬಿತ್ತನೆ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ತಾಲ್ಲೂಕಿನಾದ್ಯಂತ ಒಟ್ಟು 51,582 ಹೆಕ್ಟರ್ ಬಿತ್ತನೆ ಗುರಿ ಹೊಂದಲಾಗಿದೆ. ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 19,500 ಹೆಕ್ಟೇರ್ ಮೆಕ್ಕೆಜೋಳ, 4,050 ಹೆಕ್ಟೆರ್ ಜೋಳ, 3,500 ಹೆಕ್ಟೇರ್ ಭತ್ತ, 9,500 ಹೆಕ್ಟೇರ್ ಹೆಸರು, 300 ಹೆಕ್ಟೇರ್ ತೊಗರಿ, 6,700 ಹೆಕ್ಟೇರ್ ಸೂರ್ಯಕಾಂತಿ ಹಾಗೂ 5,700 ಹೆಕ್ಟೇರ್ ಶೇಂಗಾ ಬಿತ್ತನೆಯ ಗುರಿ ಹೊಂದಲಾಗಿದೆ. ತಾಲ್ಲೂಕಿನ ಡಂಬಳ ಮತ್ತು ಮುಂಡರಗಿ ರೈತ ಸಂಪರ್ಕ ಕೇಂದ್ರಗಳಲ್ಲಿ 30 ಕ್ವಿಂಟಲ್ ಹೆಸರು, 20 ಕ್ವಿಂಟಲ್ ಜೋಳ ಹಾಗೂ 25 ಕ್ವಿಂಟಲ್ ತೊಗರಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ.

ತಾಲ್ಲೂಕಿನಾದ್ಯಂತ ಖಾಸಗಿ ಕೃಷಿ ಪರಿಕರ ಮಾರಾಟ ಮಳಿಗೆಗಳಲ್ಲಿ 503 ಮೆಟ್ರಿಕ್ ಟನ್ ಯೂರಿಯಾ, 287 ಮೆಟ್ರಿಕ್ ಟನ್ ಡಿ.ಎ.ಪಿ, 284 ಮೆಟ್ರಿಕ್ ಟನ್ ಕಾಂಪ್ಲೆಕ್ಸ್‌ ಗೊಬ್ಬರಗಳ ದಾಸ್ತಾನು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ರೈತರ ವಾಸ್ತವಿಕ ಹಿಡುವಳಿ ಅಥವಾ ಗರಿಷ್ಠ ಎರಡು ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ಬಿತ್ತನೆ ಬೀಜಗಳನ್ನು ಒಬ್ಬ ರೈತರಿಗೆ ಒಂದು ಬೆಳೆಯ ಮೂರು ಎಕರೆ ವಿಸ್ತೀರ್ಣಕ್ಕೆ ಮಾತ್ರ ನೀಡಲಾಗುವುದು. ಎರಡು ಎಕರೆ ಜಮೀನಿಗೆ ಅನ್ಯ ಬೆಳೆಯ ಬೀಜವನ್ನು ಪಡೆಯಬಹುದಾಗಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆ ವೈವಿಧ್ಯತೆ ರೂಢಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಸರ್ಕಾರವು ಈ ನಿಯಮವನ್ನು ರೂಪಿಸಿದೆ. ಪ್ರಮಾಣಿತ ಬೀಜವನ್ನು ಒಂದು ಬಾರಿ ಪಡೆದ ರೈತನಿಗೆ ಮುಂದಿನ ಮೂರು ವರ್ಷ ಅದೇ ಬೆಳೆಯ ಬಿತ್ತನೆ ಬೀಜವನ್ನು ನೀಡಲು ನಿಯಮಾವಳಿಯಲ್ಲಿ ಅವಕಾಶ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಎಲ್ಲ ಬಿತ್ತನೆ ಬೀಜಗಳಿಗೆ ಕಡ್ಡಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆಗೆ ಬಳಸಬೇಕು. ಬೀಜೋಪಚಾರಕ್ಕೆ ಬಳಸಬಹುದಾದ ಔಷಧವು ಎರಡೂ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯ ಇವೆ. ಬಿತ್ತನೆ ಬೀಜ ಪಡೆಯುವಾಗ ರೈತರು ಆಧಾರ್‌ ಕಾರ್ಡ್‌ ಪ್ರತಿ, ಬ್ಯಾಂಕ್ ಪಾಸ್‍ಬುಕ್ ಪ್ರತಿ ಹಾಗೂ ಜಮೀನಿನ ದಾಖಲೆಗಳನ್ನು ಹಾಜರುಪಡಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಆರ್.ಡಿ. ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.