ADVERTISEMENT

ವಾರ್ತಾ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 4:17 IST
Last Updated 14 ಮಾರ್ಚ್ 2023, 4:17 IST

ರೋಣ: ಫಲಾನುಭವಿಗಳ ಸಮಾವೇಶದಲ್ಲಿ ಗುತ್ತಿಗೆದಾರನೊಬ್ಬ ವಾರ್ತಾ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆಯಿತು.

ಪತ್ರಕರ್ತರಿಗೆ ಮೀಸಲಿಟ್ಟಿದ್ದ ಜಾಗದಲ್ಲಿ ಬಂದು ಕುಳಿತಿದ್ದ ಅವನನ್ನು ವಾರ್ತಾ ಇಲಾಖೆ ಸಿಬ್ಬಂದಿ, ‘ಪತ್ರಕರ್ತರಿಗೆ ಕೂರಲು ಅವಕಾಶ ಮಾಡಿಕೊಡಿ’ ಅಂತ ಮನವಿ ಮಾಡಿದ್ದಕ್ಕೆ ಆತ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾದ. ಆಗ ಅಲ್ಲಿದ್ದ ಪತ್ರಕರ್ತರೆಲ್ಲರೂ ಗುತ್ತಿಗೆದಾರರ ವಿರುದ್ಧ ತಿರುಗಿ ಬಿದ್ದರು. ಆದರೂ, ಆತ ವಾರ್ತಾ ಇಲಾಖೆ ಸಿಬ್ಬಂದಿ ಜತೆಗೆ ಮಾತಿನ ಚಕಮಕಿ ನಡೆಸಿ, ಅವರ ಭುಜ ಹಿಡಿದ ದೂಕಿದ. ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಮುಖ್ಯಮಂತ್ರಿಗಳ ಎದುರಿನಲ್ಲೇ ವಾರ್ತಾ ಇಲಾಖೆ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಗುತ್ತಿಗೆದಾರನ ನಡೆಯನ್ನು ಖಂಡಿಸಿದ ಪತ್ರಕರ್ತರು ಕಾರ್ಯಕ್ರಮ ಬಹಿಷ್ಕರಿಸಿ, ಹೊರನಡೆಯಲು ಮುಂದಾದರು.

ADVERTISEMENT

ಆಗ ವೇದಿಕೆಯಲ್ಲಿದ್ದ, ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ತಡೆಕಂಬಿಗಳನ್ನು ಜಿಗಿದು ಬಂದು, ಹೊರಕ್ಕೆ ನಡೆಯುತ್ತಿದ್ದ ಪತ್ರಕರ್ತರನ್ನು ಸಮಾಧಾನ ಪಡಿಸಿ, ಕುಳ್ಳರಿಸಿದರು. ಸಭೆಯಲ್ಲಿ ಅಶಾಂತಿ ಸೃಷ್ಟಿಗೆ ಕಾರಣನಾದ ವ್ಯಕ್ತಿ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದರು. ಎಸ್‌ಪಿ ಮಾತಿಗೆ ಬೆಲೆ ಕೊಟ್ಟ ಪತ್ರಕರ್ತರು ಹಿಂದಿರುಗಿದರು.

ಸಭಾ ಕಾರ್ಯಕ್ರಮ ಮುಗಿದ ಬಳಿಕ ರೋಣ ಪೊಲೀಸ್‌ ಠಾಣೆಗೆ ತೆರಳಿದ ಪತ್ರಕರ್ತರು ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ, ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.