ADVERTISEMENT

ಗದಗ: ‘ಇಂಧನ ದರ ಇಳಿಸದಿದ್ದರೆ ಹೋರಾಟ’

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಆಟೊ ಚಾಲಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 4:25 IST
Last Updated 5 ಏಪ್ರಿಲ್ 2022, 4:25 IST
ಗದಗ ಜಿಲ್ಲಾ ಆಟೊ ಚಾಲಕರು ತಹಶೀಲ್ದಾರ್‌ ಕಿಶನ್‌ ಕಲಾಲ ಅವರ ಮೂಲಕ ಕೇಂದ್ರದ ಇಂಧನ ಸಚಿವ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು
ಗದಗ ಜಿಲ್ಲಾ ಆಟೊ ಚಾಲಕರು ತಹಶೀಲ್ದಾರ್‌ ಕಿಶನ್‌ ಕಲಾಲ ಅವರ ಮೂಲಕ ಕೇಂದ್ರದ ಇಂಧನ ಸಚಿವ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು   

ಗದಗ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಯಿಂದಾಗಿ ಆಟೊ ಚಾಲಕ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಗದಗ ಜಿಲ್ಲಾ ಆಟೊ ಚಾಲಕರು ಮತ್ತು ಮಾಲೀಕರ ಸಂಘ ಹಾಗೂ ಉತ್ತರ ಕರ್ನಾಟಕ ಆಟೊ ಚಾಲಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ತಿಂಗಳಿಗೆ ಎರಡರಿಂದ ಮೂರು ಬಾರಿ ಪೆಟ್ರೋಲ್, ಡಿಸೇಲ್ ಮತ್ತು ಸಿಎನ್‌ಜಿ ಬೆಲೆ ಏರಿಕೆ ಆಗುತ್ತಿರುವುದರಿಂದ ಆಟೊರಿಕ್ಷಾ ಚಾಲಕರು ಹಲವು ಸಮಸ್ಯೆಗಳನ್ನು ಎದರಿಸುವಂತಾಗಿದೆ. ಇದರ ಜತೆಗೆ ಆಟೊ ಬಿಡಿಭಾಗಗಳು, ಆಯಿಲ್ ಮತ್ತು ವಾಹನ ವಿಮೆ, ಆರ್‌ಟಿಒ ಶುಲ್ಕ ಹೆಚ್ಚಳವಾಗಿದೆ. ಇದರಿಂದಾಗಿ ಮನೆ ಬಾಡಿಗೆ, ನೀರಿನ ಬಿಲ್, ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಇವೆಲ್ಲವೂ ಆಟೊ ಚಾಲಕರಿಗೆ ಹೊರೆಯಾಗಿ ಪರಿಣಮಿಸಿವೆ. ಆದಕಾರಣ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಸರ್ಕಾರಗಳು ಆಟೊ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸಿ ಚಾಲಕರಿಗೆ ಸಿಗಬೇಕಾದ ಮೂಲಸೌಕರ್ಯವನ್ನು ತಕ್ಷಣವೇ ಒದಗಿಸಬೇಕು ಆಗ್ರಹಿಸಿದರು.

ಆಟೊ ಚಾಲಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ADVERTISEMENT

ಆಟೊ ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಕಲ್ಮನಿ, ಮಂಜುನಾಥ ಅಗಸಿಮನಿ, ಬಸವರಾಜ ಮನಗುಂಡಿ, ಖಜಾಂಚಿ ಬಾಬಾಜಾನ್‌ ಬಳಗಾನೂರ, ಗಂಗಾಧರ ಬ್ಯಾಗೋಟಿ, ಹುಲಗೇಶ ಗೆಜ್ಜಳ್ಳಿ, ಶಿವರಾಜ ಹಡಗಲಿ, ಮೋಹನ ಸಿಂಗಾಡಿ,ಸಲೀಂ ಭಾವಿಕಟ್ಟಿ, ಮಹೇಶ ಬಸಾಪೂರ, ರಮೇಶ ನಿಗಡೆ, ಉದಯ ಪನ್ನೂರ, ಅಯ್ಯಪ್ಪ ಭಂಡಾರಿ, ಮಲ್ಲಿಕ್‌ ಸಂಗಾಪೂರ, ಜೀವನಸಾಬ ನಮಾಜಿ, ಸಲೀಂ ಶಿರಹಟ್ಟಿ, ರಫೀಕ್ ಮುಳಗುಂದ, ಗೌಸ‌್ ಸಾಬ, ಪಂಪೇಶ ಪರಾಪುರ, ಈರಣ್ಣ ಗೆಜ್ಜೆಳ್ಳಿ, ಅಶೋಕ ಮಾನೇದ, ಶಫೀವುಲ್ಲಾ ಮುಲ್ಲಾ, ಶಮೀರ ಬಾಳಿಕಾಯಿ, ರಾಘವೇಂದ್ರ ಗೆಜ್ಜೆಳ್ಳಿ ಇದ್ದರು.

ಆಟೊ ಚಾಲಕರ ಸಂಘದ ಬೇಡಿಕೆಗಳು

*ಕೇಂದ್ರ ಹಾಗೂ ರಾಜ್ಯ ಸರ್ಕಾರಗಳುಇಂಧನದ ಹೊಸ ದರವನ್ನು ಕೂಡಲೇ ಕೈ ಬಿಡಬೇಕು
* ಆಟೊ ಚಾಲಕರ ಮಕ್ಕಳಿಗೆ ಎಲ್‌ಕೆಜಿಯಿಂದ ಉನ್ನತ ವ್ಯಾಸಂಗದವರೆಗೆ ಉಚಿತ ಶಿಕ್ಷಣ ನೀಡಬೇಕು
*ಆಟೊ ಚಾಲಕರಿಗೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಆಟೊ ಕಾಲೊನಿ ನಿರ್ಮಿಸಬೇಕು
* ರಿಕ್ಷಾಗಳ ವಿಮೆ ದರವನ್ನು ಯಾವುದೇ ಕಾರಣಕ್ಕೂ ಹೆಚ್ಚಿಸಬಾರದು
* ಆಟೊ ಚಾಲಕ ಅಪಘಾತದಲ್ಲಿ ಮರಣ ಹೊಂದಿದರೆ ಅಥವಾ ಅಂಗಾಂಗ ಕಳೆದುಕೊಂಡಲ್ಲಿ ಅವರ ಕುಟುಂಬಕ್ಕೆ ₹10 ಲಕ್ಷ ಪರಿಹಾರಧನ ಒದಗಿಸಬೇಕು
* ಆಟೊ ಚಾಲಕನಿಗೆ 60 ವರ್ಷ ತುಂಬಿದ ನಂತರ ಅವನ ಚಾಲನಾ ಪರವಾನಗಿ ನವೀಕರಣ ಆಗುವುದಿಲ್ಲ. ಆದಕಾರಣ ಅಂತಹ ವ್ಯಕ್ತಿಗಳಿಗೆ ಸರ್ಕಾರ ಪ್ರತಿ ತಿಂಗಳು ₹10 ಸಾವಿರ ಮಾಸಾಶನ ನೀಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.