ADVERTISEMENT

ಕೃಷಿ ಕ್ಷೇತ್ರದ ಉತ್ತೇಜನಕ್ಕೆ ಒತ್ತು

ಸೋಮೇಶ್ವರ ದೇವಸ್ಥಾನ ಮಹಾದ್ವಾರ ಲೋಕಾರ್ಪಣೆ– ಸಚಿವ ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 4:10 IST
Last Updated 6 ಏಪ್ರಿಲ್ 2022, 4:10 IST
ಲಕ್ಷ್ಮೇಶ್ವರದಲ್ಲಿ ಮಂಗಳವಾರ ನಡೆದ ಸೋಮೇಶ್ವರ ದೇವಸ್ಥಾನದ ಮಹಾದ್ವಾರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿದರು
ಲಕ್ಷ್ಮೇಶ್ವರದಲ್ಲಿ ಮಂಗಳವಾರ ನಡೆದ ಸೋಮೇಶ್ವರ ದೇವಸ್ಥಾನದ ಮಹಾದ್ವಾರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿದರು   

ಲಕ್ಷ್ಮೇಶ್ವರ: ‘ಕೃಷಿ ಕೆಲಸಕ್ಕೆ ಬಳಸುವ ಟ್ರ್ಯಾಕ್ಟರ್‌ಗಳಿಗೆ ಅಗತ್ಯವಿರುವ ಡೀಸೆಲ್‌ ಅನ್ನು ಸಬ್ಸಿಡಿ ದರದಲ್ಲಿ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದಾಗಿ ರಾಜ್ಯದ 69 ಲಕ್ಷ ಸಣ್ಣ ರೈತರಿಗೆ ಅನುಕೂಲ ಆಗಲಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಪಟ್ಟಣದ ಸೋಮೇಶ್ವರ ದೇವಸ್ಥಾನದ ಪೂರ್ವ ದಿಕ್ಕಿನ ಮಹಾದ್ವಾರವನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಲು ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಶೇ 90ರಷ್ಟು ಸಬ್ಸಿಡಿಯಲ್ಲಿ ರೈತರಿಗೆ ತುಂತುರು ನೀರಾವರಿ ಪರಿಕರಗಳ ವಿತರಿಸಲಾಗುವುದು.ಲಕ್ಷ್ಮೇಶ್ವರದಲ್ಲಿನ ಪುಲಿಗೆರೆ ಉತ್ಸವಕ್ಕೆ ಸಹಾಯ, ಸಹಕಾರ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

‘ವಿವಿಧ ಕಾರಣಗಳಿಂದಾಗಿ ಯುವಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ದೇಶಕ್ಕೆ ಅನ್ನ ಕೊಡುವ ರೈತ ಕೃಷಿಯಿಂದ ವಿಮುಖರಾಗಬಾರದು ಎಂಬ ಉದ್ಧೇಶದಿಂದ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದು ಹೇಳಿದರು.

ಶಾಸಕ ರಾಮಣ್ಣ ಲಮಾಣಿ ಮಾತನಾಡಿ ‘ಎರಡು ವರ್ಷಗಳ ಸತತ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಬಹುತೇಕ ಎಲ್ಲ ರಸ್ತೆಗಳು ಹಾಳಾಗಿವೆ. ಸರ್ಕಾರದಿಂದ ಹೆಚ್ಚಿನ ಅನುದಾನ ತರುವುದರ ಮೂಲಕ ಎಲ್ಲ ರಸ್ತೆಗಳನ್ನು ನಿರ್ಮಿಸಲು ಕ್ರಮಕೈಗೊಳ್ಳುತ್ತೇನೆ’ ಎಂದರು.

‘ತೀರಾ ಹದಗೆಟ್ಟಿರುವ ಲಕ್ಷ್ಮೇಶ್ವರದ ಬಜಾರ್‌ ರಸ್ತೆಯನ್ನು ಇನ್ನು ಕೆಲ ದಿನಗಳಲ್ಲಿ ನಿರ್ಮಿಸಲಾಗುವುದು’ ಎಂದರು.

ಮಹಾದ್ವಾರ ನಿರ್ಮಾಣ ಸಮಿತಿ ಅಧ್ಯಕ್ಷ ಸೋಮಣ್ಣ ಮುಳಗುಂದ ಮಾತನಾಡಿ ‘ಸೋಮೇಶ್ವರ ದೇವಸ್ಥಾನದ ಉತ್ತರ ದಿಕ್ಕಿನ ದ್ವಾರದ ಜೀರ್ಣೋದ್ಧಾರ ಮತ್ತು ಯಾತ್ರಿ ನಿವಾಸ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ತರಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸೋಣ’ ಎಂದರು.

ಸಾನ್ನಿಧ್ಯ ವಹಿಸಿದ್ದ ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ‘ಎಲ್ಲರೂ ಒಗ್ಗಟ್ಟಾಗಿ ದುಡಿದಾಗ ಸುಂದರ ಸಮಾಜ ನಿರ್ಮಾಣಗೊಳ್ಳುತ್ತದೆ. ಇದಕ್ಕೆ ಸೋಮೇಶ್ವರ ಮಹಾದ್ವಾರವೇ ಸಾಕ್ಷಿ. ಅದರಂತೆ ಸಮೀಪದ ಮುಕ್ತಿಮಂದಿರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನಾ ಕಾರ್ಯ ಭರದಿಂದ ಸಾಗಿದ್ದು ಇದಕ್ಕೆ ಭಕ್ತರ ಸಹಾಯ, ಸಹಕಾರ ಇರಲಿ’ ಎಂದರು.

ಪುರಸಭೆ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ ಅಧ್ಯಕ್ಷತೆ ವಹಿಸಿದ್ದರು. ಮುಕ್ತಿಮಂದಿರದ ವಿಮಲರೇಣುಕ ವಿರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಚಂಬಣ್ಣ ಬಾಳಿಕಾಯಿ, ಕುಬೇರಪ್ಪ ಮಹಾಂತಶೆಟ್ಟರ, ಆನಂದಪ್ಪ ಮೆಕ್ಕಿ, ಸುರೇಶ ರಾಚನಾಯ್ಕರ್, ಸಿದ್ದನಗೌಡ ಬಳ್ಳೊಳ್ಳಿ, ಶಿವಯೋಗಿ ಅಂಕಲಕೋಟಿ, ಪೂರ್ಣಾಜಿ ಖರಾಟೆ, ಬಸಣ್ಣ ಮೆಣಸಿನಕಾಯಿ, ವಿ.ಎಲ್. ಪೂಜಾರ, ಪುರಸಭೆ ಉಪಾಧ್ಯಕ್ಷೆ ಮಂಜವ್ವ ನಂದೆಣ್ಣವರ,ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಇದ್ದರು.

ಸೋಮೇಶ್ವರ ದೇವಸ್ಥಾನ ಭವ್ಯ ಇತಿಹಾಸ ಹೊಂದಿದೆ. ಜೊತೆಗೆ ಮುಕ್ತಿಮಂದಿರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆ ನಡೆಯಲಿದ್ದು ಎರಡನ್ನೂ ಸರ್ಕಾರ ಪ್ರವಾಸಿ ಕೇಂದ್ರಗಳನ್ನಾಗಿ ಘೋಷಣೆ ಮಾಡಬೇಕು

ಜಿ.ಎಂ. ಮಹಾಂತಶೆಟ್ಟರ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.