ADVERTISEMENT

ಜನಾರ್ದನ ರೆಡ್ಡಿಗೆ ಬೆಂಬಲ ನೀಡಿಲ್ಲ: ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 20:02 IST
Last Updated 1 ಜನವರಿ 2023, 20:02 IST
 ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ   

ಗದಗ: ‘ಮಾಜಿ ಮುಖ್ಯಮಂತ್ರಿ,ಶಾಸಕ ಬಿ.ಎಸ್‌.ಯಡಿಯೂರಪ್ಪ ನಾಯಕತ್ವದ ಬಗ್ಗೆ ವಿರೋಧ ಪಕ್ಷದವರೂ ಹಲವು ಬಾರಿ ಹೊಗಳಿದ್ದಾರೆ. ಅದೇ ರೀತಿ, ಜನಾರ್ದನ ರೆಡ್ಡಿ ಕೂಡ ಬಿಎಸ್‌ವೈ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಹಾಗಂತ, ರೆಡ್ಡಿ ಅವರಿಗೆ ಯಡಿಯೂರಪ್ಪನವರ ಬೆಂಬಲ ಇದೆ ಎಂಬುದು ಸತ್ಯಕ್ಕೆ ದೂರವಾದ ಮಾತು’ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಯಡಿಯೂರಪ್ಪ ನೇರ ರಾಜಕಾರಣ ಮಾಡುವ ಎದೆಗಾರಿಕೆ ಇರುವ ವ್ಯಕ್ತಿ. ಹಿಂದೆ ನಿಂತು ಯಾವತ್ತೂ ರಾಜಕಾರಣ ಮಾಡಿದವರಲ್ಲ. ಹೀಗಿರುವಾಗ ರೆಡ್ಡಿಗೆ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ’ ಎಂದರು.

‘ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಬಿ.ವೈ.ವಿಜಯೇಂದ್ರ ಹಿನ್ನೆಲೆಗೆ ಸರಿದಿದ್ದಾರೆ ಎಂಬುದು ಸುಳ್ಳು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಸಿಎಂ ಬೊಮ್ಮಾಯಿ, ಬಿಎಸ್‌ವೈ ಹಾಗೂ ಪಕ್ಷದ ಹಿರಿಯರ ನಾಯಕತ್ವದಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ, ಪಕ್ಷ ಸಂಘಟನೆ ಮಾಡುತ್ತಿದ್ದೇನೆ’ ಎಂದು ಹೇಳಿದರು.

ADVERTISEMENT

ಕೇಂದ್ರ ಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಅವರು ಗೈರಾಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ಯಡಿಯೂರಪ್ಪ ವಿದೇಶಕ್ಕೆ ಹೋಗುವ ಕಾರ್ಯಕ್ರಮ ಎರಡು ತಿಂಗಳ ಹಿಂದೆಯೇ ತೀರ್ಮಾನವಾಗಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಈ ಬಗ್ಗೆ ಬಿಎಸ್‌ವೈ ಅವರು ಅಮಿತ್‌ ಶಾ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಯಡಿಯೂರಪ್ಪ ಸಂತೋಷದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.